ನವದೆಹಲಿ : ಮಹಿಳೆಯರ ವಿವಾಹದ ವಯಸ್ಸನ್ನು 18ರಿಂದ 21ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ನಿನ್ನೆ ಕೇಂದ್ರ ಸಂಪುಟ ಅಂಗೀಕರಿಸಿದೆ. 2020ರ ಆಗಸ್ಟ್ 15ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವಾಗ ಈ ವಿಚಾರವನ್ನು ಪ್ರಸ್ತಾಪಸಿದ್ದರು. ಇದೀಗ ಒಂದೂವರೆ ವರ್ಷದ ಬಳಿಕ ಅದನ್ನೀಗ ಅನುಷ್ಠಾನಕ್ಕೆ ತರಲು ಕೇಂದ್ರ ಸಂಪುಟ ಮುಂದಾಗಿದೆ.
ರಾಜಕಾರಣಿ ಮತ್ತು ಹೋರಾಟಗಾರ್ತಿ ಜಯಾ ಜೇಟ್ಲಿ ನೇತೃತ್ವದ ಕೇಂದ್ರದ ಕಾರ್ಯಪಡೆಯು ಡಿಸೆಂಬರ್ 2020ರಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಿದ ಶಿಫಾರಸುಗಳ ಆಧಾರದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೂಲಗಳ ಪ್ರಕಾರ, 18ರಿಂದ 21 ವರ್ಷಕ್ಕೆ ಮಹಿಳೆಯರ ವಿವಾಹದ ವಯಸ್ಸು ಹೆಚ್ಚಿಸಲು ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ತಿದ್ದುಪಡಿಗಾಗಿ ಸದನದಲ್ಲಿ ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಕಾಯ್ದೆಯ ಜೊತೆಗೆ ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ-1995ರಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತದೆ ಎನ್ನಲಾಗ್ತಿದೆ.
ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ, ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ. ಹೀಗಾಗಿ ಒಂದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಒಂದು ಟಾಸ್ಕ್ ಫೋರ್ಸ್ ರಚಿಸಿತ್ತು. ಈ ಟಾಸ್ಕ್ ಫೋರ್ಸ್ ನ ಶಿಫಾರಸ್ಸಿನ ಅನ್ವಯ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.










