ಮಾ.17ರಂದು ಮೋದಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದಾರೆ : ಸಚಿವ ಸುಧಾಕರ್.

60
firstsuddi

ಚಿಕ್ಕಬಳ್ಳಾಪುರ: ಮಾರ್ಚ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ಕೆ. ಸುಧಾಕರ್ ಹೇಳಿದರು.

ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ 1.5 ಕೋಟಿ ಕಾರ್ಡುಗಳ ವಿತರಣೆ ಮಾಡುವ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಇದರ ಜೊತೆಗೆ ವೈದ್ಯಕೀಯ ಕಾಲೇಜು ಉದ್ಘಾಟನೆ ಮತ್ತು 22 ಸಾವಿರ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲು ಮಾ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ ಎಂದರು.

ಮೋದಿ ಅವರ ಹಸ್ತದಿಂದಲೇ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಲಾಗುವುದು. ನಿವೇಶನದ ಜೊತೆಗೆ ಮನೆಗಳ ನಿರ್ಮಾಣದ ಆದೇಶಪತ್ರಗಳನ್ನೂ ನೀಡಲಾಗುವುದು. ಹಳೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 3 ಎಕರೆ ಭೂಮಿ ಗುರುತಿಸಲಾಗಿದ್ದು, ಇದರಲ್ಲಿ 107 ನಿವೇಶನ ನಿರ್ಮಾಣವಾಗಲಿದೆ. ಅದರ ಜೊತೆಗೆ ಮತ್ತೊಂದು ಪ್ರದೇಶದಲ್ಲಿ 3 ಎಕರೆ ಜಾಗ ಗುರುತಿಸಿದ್ದು, ಇದರಲ್ಲಿ 120 ನಿವೇಶನ ಆಗಲಿದೆ ಎಂದು ಹೇಳಿದರು.

ಜೊತೆಗೆ ಉಪ್ಪರಹಳ್ಳಿಯಲ್ಲಿ 9.20 ಎಕರೆ ಭೂಮಿ ಸೇರಿ ಒಟ್ಟು707 ನಿವೇಶನಗಳನ್ನು ಹಳೇಹಳ್ಳಿ ಗ್ರಾ.ಪಂ. ಒಂದರಲ್ಲಿಯೇ ವಿತರಿಸಲಾಗುವುದು. ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ನಿವೇಶನ ರಹಿತರ ಸಂಖ್ಯೆ 194 ಮಾತ್ರ ಇದ್ದು, ಇನ್ನೂ ನಿವೇಶನಗಳು ಉಳಿಯುವುದರಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಬಡವರನ್ನು ಗುರುತಿಸಿ, ಅವರಿಂದ ಅರ್ಜಿ ಪಡೆದು, ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.