ನವದೆಹಲಿ: ಮಾಜಿ ಪ್ರಧಾನಿ, ಜಾಗತಿಕ ಭಾರತದ ಶಿಲ್ಪಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಯ ನಿಗಮಬೋಧ್ ಘಾಟ್ನಲ್ಲಿ ನೆರವೇರಲಿದ್ದು, ಅಂತ್ಯಕ್ರಿಯೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ವರದಿ ತಿಳಿದುಬಂದಿದೆ. ಮನಮೋಹನ್ ಸಿಂಗ್ ಅವರು ಮನೆಯಲ್ಲಿ ದಿಢೀರ್ ಪ್ರಜ್ಞೆ ತಪ್ಪಿದ್ದು, ಅವರನ್ನು ಏಮ್ಸ್ಗೆ ದಾಖಲಿಸಲಾಗಿತ್ತು. ಆದರೆ, ಮನಮೋಹನ್ ಸಿಂಗ್ ವಯೋಸಹಜ ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಇಡೀ ದೇಶವೇ ಕಂಬನಿ ಇಡುತ್ತಿದ್ದು, ಎಲ್ಲಾ ಗಣ್ಯರು ಅಂತಿಮ ನಮನವನ್ನು ಸಲ್ಲಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ದೆಹಲಿಗೆ ತಲುಪಿದ್ದು, ದೇಶದ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪ್ರಾರ್ಥಿವ ಶರೀರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ತಲುಪಿಸಲಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಇತರೆ ರಾಜಕೀಯ ನಾಯಕರು ಮತ್ತೊಮ್ಮೆ ಅಂತಿಮ ನಮನ ಸಲ್ಲಿಸಿ, ಸಂತಾಪ ಸೂಚಿಸಿದ್ದಾರೆ. ನಂತರ ಕಾಂಗ್ರೆಸ್ ಕಚೇರಿಯಿಂದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.










