ಮಿಣಿಮಿಣಿ ಎಂಬುವುದು ಶುದ್ಧ ಕನ್ನಡ, ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ : ಹೆಚ್.ಡಿ. ಕುಮಾರಸ್ವಾಮಿ.

501
firstsuddi

ಬೆಂಗಳೂರು : ಮಿಣಿ ಮಿಣಿ ಎಂಬ ಪದ ಟ್ರೋಲ್ ಆಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಕಿಡಿಕಾರಿದ್ದಾರೆ. “ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ. ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ. ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ”ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.