ಮೈಸೂರು : ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ಮುಂದೆ ಚುನಾವಣಾ ರಾಜಕಾರಣ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಸಿದ್ದರಾಮನಹುಂಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಜನ ನನಗೆ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ, ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಪುನರ್ ಜನ್ಮ ನೀಡಿದೆ. ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನ ನಾನು ಯಾವಾಗಲೂ ಮರೆಯುವುದಿಲ್ಲ. ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಅದಕ್ಕಾಗಿ ನನ್ನನ್ನ ಹಲವಾರು ಕ್ಷೇತ್ರದ ಜನ ಸ್ಪರ್ಧೆ ಮಾಡುವಂತೆ ಕರೆಯುತ್ತಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನು. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ, ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದನ್ನ ನೀವು ಪ್ರಶ್ನೆ ಮಾಡುತ್ತೀರಾ?.ಇಂತಹ ವಿವಿಧ ಸೃಷ್ಟಿಸಿ ಅದನ್ನ ಅರಗಿಸಿಕೊಳ್ಳತ್ತೇನೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಆದರೆ, ಜನ ಬುದ್ದಿವಂತರು ಬಿಜೆಪಿ ತಂತ್ರ ಅರ್ಥವಾಗುತ್ತದೆ ಎಂದರು.
ಸ್ಪೀಕರ್ ನಿನ್ನೆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ನವರು ಎಂದು ಹೇಳಿದ್ದು ತಪ್ಪು. ಸ್ಪೀಕರ್ ಆದವರು ಪಕ್ಷತೀತವಾಗಿರಬೇಕು. ನಾನು ಯಾವಾಗಲೂ ಆರ್ ಎಸ್ ಎಸ್ ವಿರೋಧಿ. ಅವರು ಮನುವಾದಿ ಸಂಸ್ಕೃತಿಯವರು. ಸಮಾಜ ಒಡೆಯುವುದೇ ಆರ್ ಎಸ್ ಎಸ್ ನ ಅಜೆಂಡಾ. ಅದಕ್ಕಾಗಿ ನಾನು ಆರ್ ಎಸ್ ಎಸ್ ನವರನ್ನು ವಿರೋಧಿಸುತ್ತೇನೆ ಎಂದರು. ತಮ್ಮ ಪುತ್ರಿಗೆ ಶಾಸಕ ರೇಣುಕಾಚಾರ್ಯ ಸರ್ಕಾರಿ ಸೌಲಭ್ಯ ಪಡೆಯಲು ಎಸ್ ಸಿ ಪ್ರಮಾಣ ಪತ್ರ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಿಎಂ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.










