ಮುಂದಿನ ವರ್ಷದಿಂದ ಎಲ್ಲಾ ಪರೀಕ್ಷೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ.

34

ಬೆಂಗಳೂರು: ಮುಂದಿನ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್ ಗಳ ನೋಂದಣಿಯನ್ನು ವಿದ್ಯಾರ್ಥಿಗಳ ಆಧಾರ್ ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸ್ತಾಪಿಸಿದೆ. ಸೀಟ್ ಬ್ಲಾಕಿಂಗ್ ದಂಧೆಯನ್ನು ತಡೆಗಟ್ಟಲು ಪ್ರಾಧಿಕಾರವು ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಕೆಇಎ ಈ ಪ್ರಸ್ತಾವನೆಯನ್ನು ಈಗಾಗಲೇ ಇ-ಆಡಳಿತ ಇಲಾಖೆಗೆ ಸಲ್ಲಿಸಿದೆ. ಇ-ಆಡಳಿತ ಇಲಾಖೆಯು ನಮ್ಮ ಪ್ರಸ್ತಾವನೆಗೆ ಪರವಾಗಿದೆ ಮತ್ತು ಅವರು ಅನುಮೋದನೆಗಾಗಿ ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. ಶೀಘ್ರದಲ್ಲೇ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ನೋಂದಣಿಯಲ್ಲಿ ಯಾವುದೇ ರೀತಿಯ ವಂಚನೆಯನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಆಧಾರ್-ಲಿಂಕ್ಡ್ ನೋಂದಣಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಹಲವಾರು ಇಲಾಖೆಗಳಿಗೆ ಕೆಇಎ ನಡೆಸುವ ನೇಮಕಾತಿ ಪರೀಕ್ಷೆಗಳಿಗೂ ಆಧಾರ್ ಲಿಂಕ್ ಮಾಡಿದ ನೋಂದಣಿಯನ್ನು ಪರಿಚಯಿಸುವ ಯೋಜನೆಯೂ ಇದೆ ಎಂದು ಪ್ರಸನ್ನ ತಿಳಿಸಿದ್ದಾರೆ. ಎಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲಾ ಸುತ್ತುಗಳು ಪೂರ್ಣಗೊಂಡ ನಂತರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಕೋಟಾದಡಿ ಸೀಟ್ ಬ್ಲಾಕಿಂಗ್ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಇಎ ಈ ಕ್ರಮ ಕೈಗೊಂಡಿದೆ.