ಮೈಸೂರು: ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿದ ಆರೋಪ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಧಿಕಾರದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ. 75225 ಚದರ ಅಡಿ ಜಾಗವನ್ನು ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮವಾಗಿ ನೀಡಿದ ಆರೋಪ ಕೇಳಿಬಂದಿದ್ದು, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಕ್ರಮ ಎಸಗಿರುವ ಆರೋಪ ಇದಾಗಿದೆ. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ದೂರುದಾರರೂ ಆಗಿರುವ ಸ್ನೇಹಮಯಿ ಕೃಷ್ಣ, ನಿವೃತ್ತ ಶಿಕ್ಷಕ ಶಾಂತಪ್ಪರಿಂದ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಇದೀಗ ಕ್ರಮ ಕೈಗೊಂಡಿರುವ ಸರ್ಕಾರ, ಮೂರು ದಿನದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದೆ. ಮುಡಾ 50:50 ಹಗರಣದಲ್ಲಿ ನಿಯಮಬಾಹಿರವಾಗಿ ಸೈಟ್‍ಹಂಚಿಕೆ ವಿಚಾರವಾಗಿ ಮುಡಾದ ಮಾಜಿ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಆದೇಶಿಸಿದ್ದಾರೆ. ಈ ಸಂಬಂಧ ಜನವರಿ 10 ರಂದೇ ಮುಡಾದ ಆಯುಕ್ತ ರಘುನಂದನ್ ಅವರಿಗೆ ಕಾರ್ಯದರ್ಶಿಗಳು ಪತ್ರ ಕಳುಹಿಸಲಾಗಿದೆ.










