ಚಿತ್ರದುರ್ಗ : ಮುರುಘಾ ಮಠದಲ್ಲಿ 47 ಫೋಟೋಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅ.5ರ ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು ಕಳ್ಳತನವಾಗಿದ್ದವು. ರಾಷ್ಟ್ರಪತಿ, ಪ್ರಧಾನಿ, ಧಾರ್ಮಿಕ ಮುಖಂಡರು, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದರು.
ಬಳಿಕ ನ.7ರಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್ ಜೆಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಫೋಟೋ ಕಳವು ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಸವರಾಜನ್ ಫೋಟೋವನ್ನು ಕಳವು ಮಾಡುವಂತೆ ಪ್ರಚೋದನೆ ನೀಡಿದ್ದರು ಎಂಬ ಸತ್ಯ ಒಪ್ಪಿಕೊಂಡಿದ್ದರು. ಹಾಗಾಗಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಸವರಾಜನ್ ಜೊತೆ ಮತ್ತೋರ್ವ ಆರೋಪಿ ಶ್ರೀನಿವಾಸ್ ಕೂಡ ಪೊಲೀಸರ ವಶದಲ್ಲಿದ್ದು, ಬಸವರಾಜನ್ ಪತ್ನಿ ಸೌಭಾಗ್ಯ ವಶಕ್ಕೆ ಪಡೆಯಲು ಪೊಲೀಸರ ಶೋಧ ಆರಂಭಿಸಿದ್ದಾರೆ.










