ನವದೆಹಲಿ: ತ್ರಿವಳಿ ತಲಾಖ್ ನಿಷೇಧಿಸುವ ತಮ್ಮ ಸರ್ಕಾರದ ನಿರ್ಧಾರವು ಮುಸ್ಲಿಂ ಮಹಿಳೆಯರಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಿಸಿದೆ. ಮುಂಬರುವ ರಕ್ಷಾ ಬಂಧನ ಹಬ್ಬವನ್ನು ಮುಸ್ಲಿಂ ಮಹಿಳೆಯರೊಂದಿಗೂ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ.
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಸೋಮವಾರ ರಾತ್ರಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಜದ ಪ್ರತಿಯೊಂದು ವರ್ಗದವರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಗತ್ಯ. ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ತ್ವರಿತವಾಗಿ ನೀಡುವ ವಿಚ್ಛೇದನದ ಪದ್ಧತಿಯನ್ನು ಈ ಸರ್ಕಾರ ಅಪರಾಧ ಎಂದು ಪರಿಗಣಿಸಿದೆ. ಈ ನಿರ್ಧಾರ ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಿನ ಧೈರ್ಯ ತುಂಬಿದೆ. ಈ ಬಾರಿಯ ರಕ್ಷಾ ಬಂಧನದ ಸಮಯದಲ್ಲಿ ಈ ಅಲ್ಪಸಂಖ್ಯಾತ ಮಹಿಳೆಯರನ್ನು ತಲುಪುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಸಂಸದರಿಗೆ ಮೋದಿ ಅವರು ಸೂಚನೆ ನೀಡಿದ್ದಾರೆ.
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನು 2019 ರಲ್ಲಿ ಸಂಸತ್ತು ಅಂಗೀಕರಿಸಿತು, ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನುಬಾಹಿರ ಎಂದು ಘೋಷಿಸಿತು. ಈ ಅಪರಾಧಕ್ಕಾಗಿ ಪತಿಗೆ ಜೈಲು ಶಿಕ್ಷೆ ವಿಧಿಸಬಹುದು.
ರಕ್ಷಾ ಬಂಧನ ಹಬ್ಬ ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಆಚರಣೆಯಾಗಿದೆ. ಈ ಬಾರಿ ಹಬ್ಬ ಆಗಸ್ಟ್ 30 ರಂದು ನಡೆಯಲಿದೆ.










