ಮೂಡಿಗೆರೆ : ತಾಲ್ಲೂಕಿನ ಸುತ್ತಮುತ್ತ ಗುರುವಾರ ರಾತ್ರಿ ಹಾಗೂ ಇಂದು ಸಂಜೆ ಬಿದ್ದ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ರೈತರು ಆತಂಕ ಪಡುವಂಥಹ ಸ್ಥಿತಿ ನಿರ್ಮಾಣವಾಗಿದ್ದು, ಗುರುವಾರ ಸೂರ್ಯಗ್ರಹಣದ ಪ್ರಭಾವವೋ ಎಂಬಂತೆ ಸಂಜೆ 6.30ರ ವೇಳೆಗೆ ಸಣ್ಣದಾಗಿ ಉದುರಲು ಪ್ರಾರಂಭಿಸಿದ ಮಳೆ ಏಕಾಏಕಿ ಬಿರುಸು ಪಡೆದುಕೊಂಡು ರಾತ್ರಿ 8 ಗಂಟೆಯವೆರೆಗೂ ತನ್ನ ಆರ್ಭಟ ತೋರಿಸಿತು. ಇಂದು ದಾರದಹಳ್ಳಿ ಹಾಗೂ ಬಣಕಲ್ ಹೋಬಳಿಯಾಧ್ಯಂತ ಮಳೆಯಾಗಿದ್ದು, ಕಣದಲ್ಲಿ ಒಣ ಹಾಕಿದ್ದ ಕಾಫಿಬೀಜಗಳು ನೆನೆದು ಕೊಚ್ಚಿ ಹೋಗಿದ್ದು, ಮಳೆ ಬರುವ ಮುನ್ಸೂಚನೆ ಇಲ್ಲದೆ ಇದ್ದುದರಿಂದ ಬಹುತೇಕ ಕಾಫಿ ಬೆಳೆಗಾರರು ಕಾಫಿ ಬೀಜಗಳನ್ನು ಕಣದಲ್ಲಿಯೇ ಗುಡ್ಡೆ ಮಾಡಿದ್ದರು. ಆದರೆ ಅಕಾಲಿಕ ಮಳೆ ಬಹುತೇಕ ಒಣಗಿದ್ದ ಕಾಫಿ ಬೀಜಗಳನ್ನು ನೆನೆಸಿ ಕಾಫಿ ಬೆಳೆಗಾರರನ್ನು ಆಂತಂಕಕ್ಕೆ ಈಡುಮಾಡಿತು. ಇದಿಷ್ಟೇ ಅಲ್ಲದೆ ಭತ್ತದ ಗದ್ದೆಗಳಲ್ಲಿ ಪೈರು ಕೊಯ್ಲು ಮಾಡಿ ಒಣಗಲು ಬಿಟ್ಟಿದ್ದ ಭತ್ತದ ತೆನೆಗಳು ಕೂಡ ಸಂಪೂರ್ಣವಾಗಿ ನೆನೆದುಹೋಗಿದ್ದು, ಭತ್ತದ ಕಾಳುಗಳು ಗದ್ದೆಯಲ್ಲಿಯೇ ಉದುರುವ ಭೀತಿ ಎದುರಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಹುತೇಕ ಭತ್ತದ ಗದ್ದೆಗಳು ಕೊಯ್ಲಿಗೆ ಬಂದಿರುತ್ತದೆ. ಹಲವರು ಭತ್ತದ ತೆನೆಯನ್ನು ಕೊಯ್ಲುಮಾಡಿ ಒಣಗಲು ಗದ್ದೆಗಳಲ್ಲಿ ಬಿಟ್ಟಿದ್ದರೆ, ಇನ್ನು ಕೆಲವರು ಕಣಗಳಿಗೆ ಹೊತ್ತು ಗುಡ್ಡೆ ಮಾಡಿ ಸಂಸ್ಕರಣೆ ಮಾಡಿದ್ದರು. ಆದರೆ ಮಳೆರಾಯನ ಆರ್ಭಟದಿಂದಾಗಿ ವರ್ಷಪೂರ್ತಿ ಕಷ್ಟಪಟ್ಟ ರೈತನ ಶ್ರಮವನ್ನು ಒಂದೇ ಗಂಟೆಯಲ್ಲಿ ಎಲ್ಲವನ್ನೂ ಹಾಳುಗೆಡವಿದೆ. ಇನ್ನು ಕಾಫಿ ಬೆಳೆಗಾರರು ಕಾಫಿ ತೋಟಗಳಲ್ಲಿ ಕಾಫಿ ಹಣ್ಣುಗಳು ಉದುರುವ ಭೀತಿಯಲ್ಲಿದ್ದು, ಬೇಗನೆ ಕಟಾವು ಮಾಡುವ ಯೋಜನೆಯಲ್ಲಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಫಸಲು ನಾಶಮಾಡಿಕೊಂಡಿದ್ದ ರೈತರು ಇದೀಗ ಬೀಳುತ್ತಿರುವ ಅಕಾಲಿಕ ಮಳೆಗೆ ಮನಸ್ಸಿನಲ್ಲಿಯೇ ಹಿಡಿ ಶಾಪವನ್ನು ಹಾಕುತ್ತಿದ್ದು, ಒಂದು ಬಾರಿ ಬೆಳೆಯನ್ನು ಕೊಯ್ಲು ಮಾಡಿ ಕೆಲಸ ಮುಗಿಸಿದರೆ ಸಾಕು ಎನ್ನುವ ಇರಾದೆಯಲ್ಲಿ ಇದ್ದಾರೆ. ಇದೇ ಪರಿಸ್ಥಿತಿ ಅಡಿಕೆ ಬೆಳೆಗಾರರಿಗೂ ಎದುರಾಗಿದ್ದು, ಅಡಿಕೆ ಚೇಣಿ (ಗುತ್ತಿಗೆ) ವಹಿಸಿಕೊಂಡಿರುವವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ಸಂದೀಪ್ ದಾರದಹಳ್ಳಿ ಅವರು ಆತಂಕ ವ್ಯಕ್ತಪಡಿಸಿದರು.
ಹಾಂದಿ, ಮಾಕೋನಹಳ್ಳಿ, ಬಿದಿರಹಳ್ಳಿ, ಹ್ಯಾಂಡ್ ಪೋಸ್ಟ್, ಗಂಗನಮಕ್ಕಿ, ಬಡವನ ದಿಣ್ಣೆ, ಮುಗ್ರಹಳ್ಳಿ, ದಾರದಹಳ್ಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಇಂದು ಸಂಜೆ ಪುನಃ ಮಳೆ ಬಂದಿರುವುದು ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಹೆಚ್ಚಾಗಿದ್ದು, ಆದರೂ ಈ ಬಾರಿ ಅರೇಬಿಕ ಕಾಫಿ ಹಾಗೂ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗುವ ನಿರೀಕ್ಷೆ ಇದ್ದು, ಮಲೆನಾಡಿನ ರೈತರಿಗೆ ಅಗ್ನಿ ಪರೀಕ್ಷೆ ಎಂದೇ ಹೇಳಬಹುದಾಗಿದೆ.










