ಮೂಡಿಗೆರೆ: ಪ್ರಧಾನ ಮಂತ್ರಿಯವರ ಮಹತ್ವಾಕಾಂಶಿ ಯೋಜನೆಯಲ್ಲೊಂದಾದ ಕೃಷಿ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೇರ 6000 ಸಾವಿರ ನಗದನ್ನು ಅವರವರ ಖಾತೆಗೆ ಕೇಂದ್ರ ಸರ್ಕಾರವು ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ತುಂಬಾ ಸರಳ ರೀತಿಯಲ್ಲಿ ತಂದಿದ್ದು, ಇದನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬ್ರಿಜೇಶ್ ಕಡಿದಾಳು ಅಸಮಾದಾನವನ್ನು ಹೊರಹಾಕಿದ್ದಾರೆ.
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ಸಂಬಂಧಿಸಿ ರೈತರು ಅರ್ಜಿಯನ್ನು ಕೃಷಿ ಇಲಾಖೆಯಲ್ಲಿ ನೀಡಲು ಹೋದಾಗ ಅರ್ಜಿ ಜೊತೆ ಪಹಣಿ, ಪಟ್ಟಾ, ಬ್ಯಾಂಕ್ ಪಾಸ್‍ಬುಕ್ ನಕಲು, ಫೋಟೋ ಇದರ ಪ್ರತಿಯನ್ನು ಲಗತ್ತಿಸಿ ಎಂದು ಹೇಳುತ್ತಿದ್ದು, ಅರ್ಜಿ ಸಮೇತ ಎಲ್ಲಾ ದಾಖಲೆಗಳನ್ನು ನೀಡಿದರೂ ಅರ್ಜಿ ಕೊಟ್ಟಿದ್ದಕ್ಕೆ ಸ್ವೀಕೃತಿ ನೀಡದೇ ಇದರಲ್ಲಿ ಅರ್ಜಿಗೆ ಸಂಬಂಧಿಸಿದ ಆ ದಾಖಲೆ ಇಲ್ಲ ಈ ದಾಖಲೆ ಇಲ್ಲ ಎಂದು ರೈತರಿಗೆ 2ರಿಂದ 3ಬಾರಿ ಹಿಂದೆ ಮುಂದೆ ತಿರುಗಿಸುತ್ತಿದ್ದು, ಹಲವು ರೈತರು ಈ ಹಿಂದೆ ಅರ್ಜಿ ಕೊಟ್ಟಿದ್ದೇನೆ ಹಣ ಬಂದಿಲ್ಲ ಎಂದು ಕೇಳಿದರೆ ನೀವು ಈ ಮುಂಚೆ ಅರ್ಜಿಯನ್ನು ನೀಡಿರುವುದು ಸರಿಯಿಲ್ಲ ಅಥವಾ ಅರ್ಜಿಯನ್ನು ಕೊಟ್ಟಿರುವುದಿಲ್ಲ ಎಂಬಂತಹ ಸಬೂಬು ನೀಡಿ ರೈತರನ್ನು ದಾರಿ ತಪ್ಪಿಸುತ್ತಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರೈತರು ಕೇಂದ್ರ ಸರ್ಕಾರದ ಯೋಜನೆಯನ್ನು ಪಡೆಯಲು ಈ ಹಿಂದೆ ಅರ್ಜಿಯನ್ನು ನೀಡಿ ತಮ್ಮ ಖಾತೆಗೆ ಹಣವು ಯಾವಾಗ ಜಮೆಯಾಗಬಹುದು ಎಂದು ಕಾದು ನಿಂತ ರೈತರು ತಮ್ಮ ಖಾತೆಗೆ ಹಣವು ಜಮವಾಗದಿದ್ದಾಗ ಇದರ ಬಗ್ಗೆ ಮೂಡಿಗೆರೆಯ ಬಿಳಗುಳದಲ್ಲಿರುವ ಕೃಷಿ ಇಲಾಖೆಯಲ್ಲಿ ಕೇಳಲೋದಾಗ ನೀವು ಕೊಟ್ಟ ಅರ್ಜಿಯಲ್ಲಿ ಲೋಪವಿದೆ ನೀವು ಮತ್ತೊಂದು ಬಾರಿ ಅರ್ಜಿಯನ್ನು ನೀಡಿ ಎಂಬಂತಹ ಉತ್ತರವು ರೈತರಿಗೆ ನೀಡುತ್ತಿದ್ದು, ಆದರೆ ಅರ್ಜಿ ನೀಡಿದ ಬಗ್ಗೆ ಸ್ವೀಕೃತಿ ನೀಡದ ಕಾರಣ ಅದನ್ನು ದೃಢೀಕರಿಸಿ ಹೇಳಲು ಇಲ್ಲಿನ ರೈತರಿಗೆ ಅಸಾಧ್ಯವಾಗಿದೆ.
ಸರ್ಕಾರ ನೀಡುವ ಹಣವನ್ನು ಪಡೆಯಲೆಂದು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ತಮ್ಮ ದಿನನಿತ್ಯದ ಕೆಲಸವನ್ನು ಬಿಟ್ಟು ಬಂದು ಬಸ್ಸು ಆಟೋರಿಕ್ಷ ಊಟ ಹೀಗೆಯೇ ಎಲ್ಲವನ್ನೂ ಸೇರಿಸಿದರೆ ಸುಮಾರು 500 ರೂಗಳವರೆಗೂ ಖರ್ಚು ಆಗುವುದು ಸಹಜ. ಆದರೆ ಇದೊಂದೆ ಕೆಲಸಕ್ಕೆ ಸುಮಾರು ಮೂರು ನಾಲ್ಕು ಬಾರಿ ಬರುವುದರಿಂದ ಸಿಗುವ 6000 ಸರ್ಕಾರದ ಹಣಕ್ಕೆ ಬದಲು ಸುಮಾರು 2000 ರೂಗಳಷ್ಟು ಹಣವು ಅರ್ಜಿ ನೀಡುವ ಸಲುವಾಗಿ ಖರ್ಚಾಗುತ್ತಿದ್ದು, ಇದರಿಂದ ರೈತರಿಗೆ ಒಂದು ಕಡೆ ಎಲ್ಲಾ ಕೆಲಸವನ್ನು ಬಿಟ್ಟು ಬಂದ ನಷ್ಟ ಒಂದು ಕಡೆಯಾದರೆ ಮತ್ತೊಂದು ಕಡೆ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಕಷ್ಟದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆಯೋ ಅಥವಾ ಇದನ್ನು ನಿಭಾಹಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸ್ಪಂದನೆ ಸರಿಯಾಗಿ ರೈತರಿಗೆ ಎಟುಕುತ್ತಿಲ್ಲವೋ ಎಂದು ತಿಳಿಯದಾಗಿದೆ.











