ಕೊಟ್ಟಿಗೆಹಾರ : ಛಾಯಾಗ್ರಾಹಕನಿಗೆ ತಾಂತ್ರೀಕ ಜ್ಞಾನದ ಜೊತೆಗೆ ಕಲಾತ್ಮಕತೆ ಇದ್ದಾಗ ಒಂದು ಪರಿಪೂರ್ಣ ಛಾಯಾಚಿತ್ರ ಮೂಡಿ ಬರಲು ಸಾಧ್ಯ ಎಂದು ಖ್ಯಾತ ಚಿತ್ರ ಕಲಾವಿದ ಸುರೇಶ್‍ಚಂದ್ರ ದತ್ತ ಅವರು ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಫಿ ಸೊಸೈಟಿ ವತಿಯಿಂದ ನಡೆದ ಎರಡು ದಿನಗಳ ಫೋಟೋಗ್ರಫಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೋರ್ವ ವ್ಯಕ್ತಿಯು ಆಸಕ್ತಿಯಿಂದ ತೆಗೆದ ಚಿತ್ರವು ಆಳವಾಗಿ ಕಥೆ ಹೇಳುವಂತಿರಬೇಕು. ತೇಜಸ್ವಿ ಅವರು ಅಪಾರ ತಾಳ್ಮೆ ಹಾಗೂ ಶ್ರದ್ದೆಯಿಂದ ಹಕ್ಕಿಗಳ ಚಿತ್ರಗಳನ್ನು ತೆಗೆಯುತ್ತಿದ್ದರು. ಇಂತಹ ಕ್ರೀಯಾಶೀಲತೆಯ ಮನೋಭಾವ ಮೈಗೂಡಿಸಿಕೊಂಡು ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯ ಎಂದರು.ಮೂಡಬಿದಿರೆಯ ಖ್ಯಾತ ಛಾಯಾಗ್ರಾಹಕ ಡಾ.ಕೃಷ್ಣಮೋಹನ್ ಅವರು ಮಾತನಾಡಿ, ಆಸಕ್ತಿ ಹುಡುಕಾಟವು ನಮ್ಮಲ್ಲಿದ್ದರೆ ಎಂತಹ ಚಿತ್ರಗಳನ್ನು ನಾವು ತೆಗೆಯಬಹುದು. ನಮ್ಮ ಸುತ್ತಮುತ್ತಲಿನ ಪರಿಸರಗಳೇ ನಮಗೆ ಸ್ಪೂರ್ತಿದಾಯಕ ತಾಣಗಳಾಗಿವೆ. ಈಗ ವಿವಿಧ ಕ್ಯಾಮರಾಗಳು ಬಂದಿದ್ದರೂ ಲ್ಯಾಂಡ್ ಸ್ಕೇಪ್‍ನಲ್ಲಿ ಚಿತ್ರ ತೆಗೆಯಲು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ. ಲ್ಯಾಂಡ್ ಸ್ಕೇಪ್ ನಲ್ಲಿ ಕೂಡ ನೈಸರ್ಗಿಕ ಹಾಗೂ ಕೃತಕ ವಿಧಗಳಾಗಿ ವಿಂಗಡಿಸಲಾಗಿದೆ. ಕ್ಯಾಮರಾದಲ್ಲಿ ಅಪರ್ಚರ್, ಶಟ್ಟರ್ ಹಾಗೂ ಐಎಸ್‍ಒ ಶೈಲಿಯನ್ನು ತಿಳಿದುಕೊಂಡರೆ ಉತ್ತಮ ಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕ ಐವನ್ ಡಿಸಿಲ್ವ, ಪೂರ್ಣಚಂದ್ರ ಪ್ರತಿಷ್ಠಾನದ ನಿರ್ದೇಶಕ ಬಾಪು ದಿನೇಶ್, ಸಾಹಿತಿ ಪೂರ್ಣೇಶ್ ಮತ್ತಾವರ, ಅತುಲ್ ರಾವ್, ಕುಲದೀಪ್ ಮಾಕೋನಹಳ್ಳಿ, ಉದಯಪ್ರಸಾದ್, ಪತ್ರಕರ್ತ ಸತೀಶ್, ನವೀನ್, ಆಕರ್ಷ್ ಇದ್ದರು. ಪೂರ್ಣೇಶ್ ಮತ್ತಾವರ ಇದ್ದರು.










