ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಸುರಿದ ರಣಭೀಕರ ಮಳೆಯಿಂದಾಗಿ, ಹಳ್ಳಿ ಸೇರಿದಂತೆ ಮುಖ್ಯರಸ್ತೆಗಳು, ದುರಸ್ಥಿಯಾಗಿರುವ ರಸ್ತೆಗಳನ್ನು ರಿಪೇರಿ ಮಾಡದ ಕಾರಣ ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ಆಗದಂತಹ ಪರಿಸ್ಥಿತಿ ಬಂದಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಇಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಮ್ಮ ಕ್ಷೇತ್ರದಲ್ಲಿ ಭಾರಿ ಪ್ರವಾಹ ಉಂಟಾದ ಪರಿಣಾಮ ಕ್ಷೇತ್ರದ ಇಡೀ ರಸ್ತೆಗಳು ಹಾಳಾಗಿ ಹೋಗಿವೆ. ನಾವು ಕ್ಷೇತ್ರಕ್ಕೆ ಹೋದರೆ ಯಾವಾಗ ರಸ್ತೆ ರಿಪೇರಿಯಾಗುತ್ತದೆ ಎಂದು ಕೇಳುತ್ತಾರೆ. ನಮಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಎನ್.ಡಿ.ಆರ್.ಎಫ್.ನಡಿ 1.89 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಈವರೆಗೂ ಆ ಹಣ ಬಂದಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಇನ್ನೂ ಪ್ರತೀ ವರ್ಷ ಪ್ರವಾಹ ಬರುವುದರಿಂದ ಮೂಡಿಗೆರೆಯನ್ನು ಶಾಶ್ವತ ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು. ಇದರಿಂದ ನಮ್ಮ ಕ್ಷೇತ್ರಕ್ಕೆ ಅನುದಾನ ಸಿಗುತ್ತದೆ ಎಂದರು.
ಇನ್ನೂ ಮೂಡಿಗೆರೆ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಶಾಸಕ ಎಂ.ಪಿ. ಕುಮಾರಸ್ವಾಮಿ ಈ ಹಿಂದೆಯೂ ಧನಿ ಎತ್ತಿದ್ದರು, ಇದೀಗಾ ಇಂದು ಸಹ ಸದನದಲ್ಲಿ ಗಮನ ಸೆಳೆದಿರುವುದು, ಕ್ಷೇತ್ರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.









