ಮೂಡಿಗೆರೆ : ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಯಾತ್ರಿಕರಿಗೆ ವಿಶ್ರಾಂತಿ ತಾಣ ಹಾಗೂ ಅನ್ನಸಂತರ್ಪಣೆ ಸೇವೆ ಒದಗಿಸಿ ಮಾನವೀಯತೆ ಮೆರೆದ ಸ್ಥಳೀಯರು

600
firstsuddi

ಮೂಡಿಗೆರೆ : ಮಹಾ ಶಿವರಾತ್ರಿಯಂದು ಧರ್ಮಸ್ಥಳದಲ್ಲಿ ನಡೆಯುವ ವಿಶೇಷ ಪೂಜೆಗೆ ಭಾಗವಹಿಸುವ ಉದ್ದೇಶದಿಂದ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಪಾದ ಯಾತ್ರೆ ನಡೆಸುತ್ತಿದ್ದು, ತಾಲ್ಲೂಕಿನ ವಿವಿದೆಡೆಗಳಲ್ಲಿ ಸ್ಥಳೀಯರು ಯಾತ್ರಿಕರಿಗಾಗಿ ವಿಶ್ರಾಂತಿ ತಾಣಗಳನ್ನು ಹಾಗೂ ಅನ್ನ ಸಂತರ್ಪಣೆ ಸೇವೆಯನ್ನು ಒದಗಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಉತ್ತರ ಕರ್ನಾಟಕದ ಬಳ್ಳಾರಿ, ಗದಗ, ಹೊಸಪೇಟೆ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದ್ದು ದಾರಿಯುದ್ದಕ್ಕೂ ಭಕ್ತರ ದಂಡುಗಳು ಕಾಣಸಿಗುತ್ತಿವೆ. ಧರ್ಮಸ್ಥಳಕ್ಕೆ ಸಾಗುವ ದಾರಿಯಲ್ಲಿ ಮೂಡಿಗೆರೆ ಎದುರಾಗುವುದರಿಂದ ಸಹಜವಾಗಿ ಯಾತ್ರಾತ್ರಿಗಳ ಜನಸಾಗರ ಹೆಚ್ಚುತ್ತಿದೆ. ತಾಲ್ಲೂಕಿಗೆ ಪ್ರವೇಶಿಸುವ ಯಾತ್ರಾತ್ರಿಗಳಿಗೆ ಕಸ್ಕೇಬೈಲಿನಿಂದ ಕೊಟ್ಟಿಗೆಹಾರದವೆರಗೂ ಅಲ್ಲಲ್ಲಿ ವಿಶ್ರಾಂತಿ ತಾಣಗಳು, ಅನ್ನ ಸಂತರ್ಪಣೆ ಕೇಂದ್ರಗಳು, ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರದು ಯಾತ್ರಾತ್ರಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳಲಾಗುತ್ತಿದೆ. ಸ್ಥಳೀಯ ಸ್ವಯಂ ಸೇವಕರುಗಳು, ದಾನಿಗಳು ಯಾತ್ರಾತ್ರಿಗಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಹಲವೆಡೆ ಉಚಿತ ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಕಸ್ಕೆ ಬೈಲ್, ಹ್ಯಾಂಡ್ ಪೋಸ್ಟ್, ಜನ್ನಾಪುರ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿ ಉಚಿತವಾಗಿ ಪಾನಕ, ಮಜ್ಜಿಗೆ, ಪಾನಕ, ಕಾಫಿ.ಟೀ. ಹಾಲು ನೀಡಿ ಯಾತ್ರಾತ್ರಿಗಳಿಗೆ ಸೇವೆ ಮಾಡಲಾಗುತ್ತಿದೆ. ಪಾದ ಯಾತ್ರಿಗಳಿಗಾಗಿ ದಾರಿಯುದ್ದಕ್ಕೂ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರದ ಭರಾಟೆ ಜೋರಾಗಿದೆ. ಸಂಜೆ ವೇಳೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಉಳಿದುಕೊಳ್ಳುತ್ತಿರುವ ಪಾದ ಯಾತ್ರಿಗಳಿಗೆ ಸ್ಥಳೀಯರು ತಮ್ಮ ಮನೆಗಳ ಬಳಿ ಸ್ಥಳಾವಕಾಶ ಒದಗಿಸುತ್ತಿದ್ದು, ಊಟ ಉಪಚಾರ ಸೇರಿದಂತೆ, ಬಿಸಿ ನೀರಿನ ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಡುತ್ತಿರುವುದು ಯಾತ್ರಾತ್ರಿಗಳ ಮನ ಗೆದ್ದಿದೆ. ಬಿಳಗುಳದ ಗಜೇಂದ್ರ ಅವರು ತಮ್ಮ ಮನೆಯ ಬಳಿ ಯಾತ್ರಾತ್ರಿಗಳಿಗೆ ಉಳಿದುಕೊಳ್ಳಲು ಹಾಗೂ ಭಜನೆ ಕಾರ್ಯಗಳನ್ನು ನಡೆಸಲು ವ್ಯವಸ್ಥೆ ಕಲ್ಪಿಸಿರುವುದು ಸ್ಥಳೀಯರ ಮೆಚ್ಚುಗೆಗ ಪಾತ್ರವಾಗಿದೆ. ಇತ್ತ ನೀರುಗಂಡಿಯ ಯೋಗೇಶ್ ಅವರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಧರ್ಮಸ್ಥಳ ಯಾತ್ರಿಗಳ ಸಮಾಜ ಸೇವಾ ಸಂಘದ ವತಿಯಿಂದ ಬೃಹತ್ ಶಿಬಿರವನ್ನು ತೆರೆಯಲಾಗಿದೆ. ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ, ಸದ್ವಿದ್ಯ ಚಾರಿಟೇಬಲ್ ವತಿಯಿಂದ ಆಯುರ್ವೇದ ಚಿಕಿತ್ಸೆ, ಪಾದಯಾತ್ರಿಗಳಿಗೆ ಸ್ನಾನದ ವ್ಯವಸ್ಥೆ, ಅನ್ನಸಂತರ್ಪಣೆ, ಪಾದ ಮಜ್ಜನ ಸೇರಿಂದಂತೆ ಹತ್ತು ಹಲವು ಸೇವೆಯನ್ನು ನೀಡಲಾಗುತ್ತಿದೆ.

ಹೆಸಗಲ್, ಚಿನ್ನಿಗಾ, ಗೋಣಿಬೀಡು, ಬಿದಿರಹಳ್ಳಿ, ಬಾಳೂರು, ಕೂವೆ, ತರುವೆ, ಬಣಕಲ್ ಮುಂತಾದ ಗ್ರಾಮ ಪಂಚಾಯತಿಗಳಿಂದ ಯಾತ್ರಿಗಳಿಗೆ ದಾರಿಯುದ್ದಕ್ಕೂ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಯಲ್ಲಿ ಹೆದ್ದಾರಿಯುದ್ದಕ್ಕೂ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗಿದ್ದು, ಪಾದಯಾತ್ರಿಗಳು ಎಚ್ಚರಿಕೆಯಿಂದ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಯಾತ್ರಿಕರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿರುವ ಪೋಲಿಸ್ ಇಲಾಖೆ ರಾತ್ರಿ ವೇಳೆಯಲ್ಲಿ ಪಾದ ಯಾತ್ರೆ ಮಾಡುವ ಯಾತ್ರಾತ್ರಿಗಳಿಗೆ ಪ್ರತಿಫಲಕ ಸೂಚಿತ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಿದೆ. ಚಾರ್ಮಾಡಿ ಘಾಟ್ ಭಾಗದಲ್ಲಿ ರಾತ್ರಿ ವೇಳೆ ಯಾತ್ರೆ ಮಾಡಬಾರದು ಎಂದು ಕೋರಿರುವ ಇಲಾಖೆ, ಉಜಿರೆ ಹಾಗೂ ಮೂಡಿಗೆರೆ ಪೋಲಿಸರನ್ನು ನಿಯೋಜಿಸಿ ರಾತ್ರಿ ವೇಳೆ ಗಸ್ತು ತಿರುಗುವ ಜವಾಬ್ದಾರಿ ತೆಗೆದುಕೊಳ್ಳಲಾಗಿದೆ.
ಯಾತ್ರಿಗಳಿಗೆ ಸಕಲ ವ್ಯವಸ್ಥೆ ಮಾಡಿರುವ ಸ್ಥಳೀಯ ಸ್ವಯಂ ಸೇವಕರು ಸಾಮುದಾಯಿಕ ಶೌಚಾಲಯಗಳನ್ನು ಬಳಸುವಂತೆ ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಹೇಳುತ್ತಿದ್ದಾರೆ. ಇದರ ಜೊತೆಯಲ್ಲಿ ದಾರಿ ಮಧ್ಯೆ ಸಿಗುವ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹಚ್ಚದಂತೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆ ನೀಡದಂತೆ ಮನವಿ ಮಾಡಿದ್ದಾರೆ.
ಶಿವರಾತ್ರಿಗೆ ಇನ್ನು ಕೇವಲ 2 ದಿನಗಳು ಬಾಕಿ ಇದ್ದು ಇಂದು ಹಾಗೂ ನಾಳೆ ಹೆಚ್ಚಿನ ಯಾತ್ರಿಕರ ಆಗಮನದ ನಿರೀಕ್ಷೆ ಇರುವುದರಿಂದ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಸ್ವಯಂ ಸೇವಕರು ಸಕಲ ಸಜ್ಜಿತರಾಗಿದ್ದಾರೆ.