ಮೂಡಿಗೆರೆ: ಇತ್ತೀಚಿಗೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇಡೀ ಪಟ್ಟಣದ ಎಲ್ಲಾ ವಾರ್ಡ್ ಗಳಿಗೆ ಹೋಲಿಸಿದರೆ ವಾರ್ಡ್ ಸಂಖ್ಯೆ 6 ರ ಮಹಿಳಾ ಮೀಸಲು ಅಭ್ಯರ್ಥಿಯಾದ ಗೀತಾ ಅಜಿತ್ ಕುಮಾರ್ ರವರು ಭಾರಿ ಪ್ರಚಂಡ ಬಹುಮತದೊಂದಿಗೆ ವಿಜಯಿಶಾಲಿಯಾಗಿರುವುದಕ್ಕೆ ಜೆ.ಡಿ.ಎಸ್ ಜಿಲ್ಲಾಧ್ಯಕ್ಷರ ಪಾತ್ರ ಬಹುದೊಡ್ಡ ವಿಜಯದ ಹಾದಿ ಸುಲಭವಾಗಿಸುವಂತೆ ಮಾಡಿದೆ ಎಂದು ನೂತನ ಪ.ಪಂಚಾಯಿತಿ ಸದಸ್ಯೆ ಗೀತಾ ಅಜಿತ್ ಕುಮಾರ್ ತಿಳಿಸಿದ್ದಾರೆ.
ವಿಜಯದ ಬಗ್ಗೆ ಪ್ರಸ್ಥಾಪಿಸಿ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗೀತಾ ಅಜಿತ್‍ಕುಮಾರ್ ನನಗೆ ಮೊದಲು ರಾಜಕೀಯವೇನೆಂದು ತಿಳಿದಿರಲಿಲ್ಲ. ಆದರೆ ನನ್ನ ಪತಿಯಾದ ಜೆ.ಡಿ.ಎಸ್.ಜಿಲ್ಲಾದ್ಯಕ್ಷರಾದಂತಹ ರಂಜನ್ ಅಜಿತ್ ಕುಮಾರ್ ರವರ ಬೆಂಬಲ ಹಾಗೂ ಸಲಹೆ ಅದಕ್ಕಿಂತ ಹೆಚ್ಚಾಗಿ ಈ ವಾರ್ಡಿನ ಎಲ್ಲಾ ವರ್ಗದ ಜನರ ಬೆಂಬಲ ನನ್ನನ್ನು ಇನ್ನಷ್ಟು ಉತ್ಸಾಹದಿಂದ ಮುನ್ನುಗ್ಗುವಂತೆ ಮಾಡಿ ಚುನಾವಣೆಯ ಮೊದಲ ಪ್ರಯತ್ನದಲ್ಲೆ ಯಶಸ್ವಿಯನ್ನು ಕಾಣುವಂತೆ ಮಾಡಿದೆ. ಇದಕ್ಕೆ ನಾನು ಇಲ್ಲಿಯ ಜನತೆಯ ಸೇವೆ ಮಾಡಲು ನನಗೆ ದೊರಕಿಸಿಕೊಟ್ಟಂತಹ ಸುವರ್ಣಾವಕಾಶವೆಂದು ಭಾವಿಸುತ್ತೇನೆ ಎಂದರು.
ನೂತನ ಸದಸ್ಯೆಯ ವಿಜಯದ ಕುರಿತು ಪ್ರತಿಕ್ರಯಿಸಿದ ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ರವರು ಮಾತನಾಡಿ ಇಲ್ಲಿ ಮಹಿಳಾ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ತೀರ್ಮಾನಿಸಿದಾಗ ಇಲ್ಲಿನ ಜನತೆ ಆಶಯದ ಮೇರೆಗೆ ನನ್ನ ಪತ್ನಿಯನ್ನು ಕಣಕ್ಕಿಳಿಸಿದ್ದು,ಇವರ ಬದಲು ಯಾರೇ ಆದರು ಅವರನ್ನು ಇಲ್ಲಿಯ ಜನತೆ ವಿಜಯಶಾಲಿಯನ್ನಾಗಿ ಮಾಡುತ್ತಿದ್ದರು. ಅದಕ್ಕೆ ಪೂರಕವೆಂಬಂತೆಯೇ ತಾಲ್ಲೂಕಿನಲ್ಲಿ ಪ್ರಥಮವಾಗಿ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನನ್ನನ್ನು 2011 ರಲ್ಲಿ ದಾರದಹಳ್ಳಿ-ಹಂತೂರು ಕ್ಷೇತ್ರದ ಜನತೆ ಪ್ರೋತ್ಸಾಹಿಸಿ ವಿಜಯದ ಪತಾಕೆಯನ್ನು ನನ್ನ ಕೈಯಲ್ಲಿ ಕೊಟ್ಟು ಅದರಂತೆ ನಾನು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾದಂತಹ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಸಮಸ್ಯೆಗಳಿಗೆ ಸ್ಪಂಧಿಸಿದ ಮೇರೆಗೆ ನನ್ನನ್ನು ಎರಡನೇ ಬಾರಿಯೂ ಭಾರಿ ಬಹುಮತದೊಂದಿಗೆ ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ ಕಳುಹಿಸಿದ್ದು ನನ್ನನ್ನು ಇನ್ನಷ್ಟು ಜನಸೇವೆಯಲ್ಲಿ ತೊಡಗುವಂತೆ ಮಾಡಿದೆ ಎಂದರು.
ಪಟ್ಟಣದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸಿದಕ್ಕೆ ಇಲ್ಲಿನ ಜನತೆಗೆ ಮೊದಲು ಧನ್ಯವಾದಗಳನ್ನು ತಿಳಿಸುವೆ. ಆದರೆ ಇಲ್ಲಿನ ಮತದಾರರು ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರೆ ಇನ್ನಷ್ಟು ಶಕ್ತಿ ಬರುತ್ತಿತ್ತು ಎಂದು ಅಭಿಪ್ರಾಯ ಪಟ್ಟ ಅವರು ಸರ್ಕಾರವು ನಮ್ಮಲ್ಲಿದ್ದು ಅದರಂತೆ ಪಟ್ಟಣಕ್ಕೆ ಹೆಚ್ಚೆಚ್ಚು ಅನುಧಾನವನ್ನು ತರಲು ಸುಲಭವಾಗುತ್ತಿತ್ತು. ಆದರೆ ಇದೆಲ್ಲವುದನ್ನು ನಾನು ಸವಾಲಾಗಿ ತೆಗೆದುಕೊಂಡು ಪಟ್ಟಣದ ಅಭಿವೃದ್ದಿಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹೆಚ್ಚಿನ ಅನುಧಾನಕ್ಕಾಗಿ ಪ್ರಯತ್ನಿಸಲಾಗುವುದು ಎಂದರು.










