ಮೂಡಿಗೆರೆ :ಬರಿಗಾಲಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿದ್ದ ಅಭ್ಯರ್ಥಿ ನವೀನ್ ಹಾವಳಿ ಗೆಲುವು.

300

ಕೊಟ್ಟಿಗೆಹಾರ:ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತು ಒಂದು ರೂಪಾಯಿ ಹಣ ಖರ್ಚು ಮಾಡದೇ ಬರಿಗಾಲಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿದ್ದ ನಿಡುವಾಳೆ ಕ್ಷೇತ್ರದ ಅಭ್ಯರ್ಥಿ ನವೀನ್ ಹಾವಳಿ ಗೆಲುವು ಸಾಧಿಸಿದ್ದಾರೆ.
ಒಟ್ಟು 496 ಮತ ಪಡೆದಿದ್ದು 91 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗದೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ನವೀನ್ ಹಾವಳಿ ಸ್ಪರ್ದಿಸಿದ್ದರು. ಅರೆಕೂಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರು ತಿಂಗಳು ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದು ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿದ್ದರು.
ಚಪ್ಪಲಿ ಚಿಹ್ನೆಯನ್ನೆ ಚುನಾವಣೆಗೆ ಆರಿಸಿಕೊಂಡಿದ್ದು ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಮನೆಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತಯಾಚಿಸಿದ್ದರು. ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದರು. ಮತಯಾಚನೆ ಮಾಡಲು ಹೋಗುವ ಪ್ರತಿ ಮನೆಯಿಂದ ಒಂದು ಹಿಡಿ ಅಕ್ಕಿಯನ್ನು ಪಡೆಯುತ್ತಿದ್ದು ಆ ಅಕ್ಕಿಯಿಂದ ಅನ್ನ ಮಾಡಿಕೊಂಡು ಸೇವಿಸುತ್ತಿದ್ದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನವೀನ್ ಹಾವಳಿ, ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು. ಹಣಬಲಕ್ಕಿಂತಲೂ ಪ್ರಾಮಾಣಿಕತೆ ಹಾಗೂ ಸೇವಾಮನೋಭಾವಕ್ಕೆ ಸಂದ ಗೆಲುವು. ಈ ಗೆಲುವನ್ನು ನಿಡುವಾಳೆ ಗ್ರಾಮಸ್ಥರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.