ಮೂಡಿಗೆರೆ : ಬಾಗಿಲು ತೆರೆದ ಹೋಟೆಲ್, ದೇಗುಲಗಳು ಹಾಗೂ ಹೋಮ್ ಸ್ಟೇಗಳು, ಸಹಜ ಸ್ಥಿತಿಗೆ ಜನಜೀವನ…

256
firstsuddi

ಮೂಡಿಗೆರೆ: ಕೊರೋನಾ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಜನಜೀವನ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಸುಮಾರು ಎರಡೂವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಮುಚ್ಚಿದ್ದ ದೇಗುಲಗಳು, ಹೋಟೆಲ್‍ಗಳು, ವಸತಿಗೃಹಗಳು, ಹೋಂಸ್ಟೇಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ.
ರಾಜ್ಯ ಸರ್ಕಾರವು ಜೂ.8ರಿಂದ ಹೋಟೆಲ್ ರೆಸಾರ್ಟ್, ಹೋಂಸ್ಟೇ, ವಸತಿ ಗೃಹಗಳು, ದೇವಾಲಯಗಳ ಬಾಗಿಲು ತೆರೆಯಲು ಅನುಮತಿ ನೀಡಿರುವುದಾಗಿ ಹೇಳಿದ ಕ್ಷಣದಿಂದ ತಾಲ್ಲೂಕಿನಾದ್ಯಂತ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿತು. ಸತತವಾಗಿ ಮೂರು ತಿಂಗಳಿನಿಂದ ಯಾವುದೇ ಆದಾಯವಿಲ್ಲದೆ ಬಳಲಿ ಬೆಂಡಾಗಿದ್ದ ಪ್ರವಾಸೋದ್ಯಮ ಪುನಃ ತನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಂಡು ಪ್ರವಾಸಿಗರಿಗಾಗಿ ಎದುರು ನೋಡುತ್ತಿದೆ. ಇತ್ತ ಕಾರ್ಮಿಕರುಗಳನ್ನು ಅವರವರ ಊರುಗಳಿಗೆ ಕಳುಹಿಸಿಕೊಟ್ಟಿರುವುದರಿಂದ ಕಾರ್ಮಿಕರ ಅಭಾವ ತಲೆದೋರಿದೆ.
ಕೆಲವು ಕೊರೋನಾ ಸೋಂಕಿನ ಪ್ರಕರಣಗಳಿಂದ ಆತಂಕಕ್ಕೆ ಒಳಗಾಗಿದ್ದ ಜಿಲ್ಲೆ, ಇದೀಗ ಕೊರೋನಾ ಸೋಂಕಿನಿಂದ ಮುಕ್ತವಾಗಿದ್ದು ಪುನಃ ಹಸಿರು ವಲಯಕ್ಕೆ ಬಂದಿರುವ ಪರಿಣಾಮ, ತಾಲ್ಲೂಕಿನಾದ್ಯಂತ ಹೋಟೆಲ್ ಹಾಗೂ ಇನ್ನಿತರೆ ವ್ಯಾಪಾರ ವಹಿವಾಟುಗಳು ಸಹಜವಾಗಿತ್ತು. ರಸ್ತೆ ಬದಿಯ ಫುಡ್ ಕಾರ್ನರ್‍ಗಳು 3 ತಿಂಗಳ ನಂತರ ಮೊದಲ ಬಾರಿಗೆ ಅಂಗಡಿಗಳನ್ನು ತೆರದು ವ್ಯಾಪಾರ ವಹಿವಾಟು ನಡೆಸಿದವು. ಬಹುತೇಕ ಜನರಿಗೆ ಅಂಗಡಿಗಳು ತೆರೆದಿರುವ ಮಾಹಿತಿ ಇರದಿದ್ದರೂ ಸಹ ದಾರಿಹೋಕರುಗಳಿಂದಲೇ ಬೀದಿ ಬದಿಯ ಅಂಗಡಿಗಳಿಗೆ ಉತ್ತಮ ವಹಿವಾಟು ನಡೆಯಿತು.

ಪ್ರವಾಸಿ ತಾಣಗಳಿಗೆ ಪ್ರವೇಶ : ರಾಜ್ಯದ ಪ್ರಮುಖ ಪ್ರವಾಸಿ ತಾಣವೆಂದು ಗುರುತಿಸಿಕೊಂಡಿರುವ ಮೂಡಿಗೆರೆ ತಾಲ್ಲೂಕಿನಾದ್ಯಂತ ಸೋಮವಾರದಿಂದಲೇ ಪ್ರವಾಸಿಗರು ಆಗಮಿಸುತ್ತಿದ್ದು, ಬಹುತೇಕ ಹೋಂಸ್ಟೇ ಹಾಗೂ ರೆಸಾರ್ಟ್‍ಗಳು ತುಂಬಿ ತುಳುಕುತ್ತಿವೆ. ಜಿಲ್ಲಾಡಳಿತವು ಪ್ರವಾಸಿ ತಾಣಗಳಿಗೆ ಪ್ರವೇಶಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂದು ಭಾನುವಾರ ಸಂಜೆಯವರೆಗೂ ನಿರ್ಧಾರ ಮಾಡದೇ ಇದ್ದುದರಿಂದ ಹಲವು ಪ್ರವಾಸಿಗರು ತಾಲ್ಲೂಕಿಗೆ ಭೇಟಿನೀಡುವ ಕಾರ್ಯಕ್ರಮವನ್ನು ಶನಿವಾರಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿ ಬಂದಿಳಿದಿದ್ದ ಪ್ರವಾಸಿಗರು ಜಿಲ್ಲಾಡಳಿತವು ಅನುಮತಿ ನೀಡಿದ ವಿಚಾರ ತಿಳಿಯುತ್ತಲೇ ತಮ್ಮ ನೆಚ್ಚಿನ ತಾಣಗಳಿಗೆ, ದೇವಾಲಗಳಿಗೆ ಭೇಟಿ ನೀಡುವ ಮೂಲಕ ಲಾಕ್‍ಡೌನ್ ಬೇಸರಿಕೆಯನ್ನು ಕಡಿಮೆ ಮಾಡಿಕೊಂಡರು.

ಮೂಡಿಗೆರೆಯ ಪ್ರಸಿದ್ಧ ತಾಣಗಳಾದ ನಾಣ್ಯದ ಭೈರವೇಶ್ವರ, ಎತ್ತಿನ ಭುಜದ ಗುಡ್ಡ, ದೇವರಮನೆಯ ಶ್ರೀ ಕಾಲ ಭೈರವೇಶ್ವರ ಸ್ವಾಮಿ ದೇವಾಲಯ ಹಾಗೂ ಪ್ರಕೃತಿ ಸೌಂದರ್ಯ, ಪುರಾತನ ದೇವವೃಂದ ದೇವಾಲಯ, ಹೊಯ್ಸಳರ ಕಾಲದ ಅಂಗಡಿ ಗ್ರಾಮ, ಚಾರ್ಮಾಡಿ ಘಾಟ್ ಸೇರಿದಂತೆ ಹೇಮಾವತಿ ನದಿಮೂಲ, ಕಳಸ, ಹೊರನಾಡು, ಕುದುರೆಮುಖ ಸೇರಿಂದಂತೆ ವಿವಿಧ ತಾಣಗಳಿಗೆ ಭೇಟಿ ನೀಡಿ ಮಸ್ತ್ ಮಜಾ ಮಾಡಿ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡರು.
ಬಹುತೇಕ ಪ್ರವಾಸಿಗರು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದು ಕೆಲವರು ಬಂದ ದಿನವೇ ಹೊರಟು ಹೋದರೆ ಬಹುತೇಕರು ತಮ್ಮ ಬಂಧುಗಳ, ಸ್ನೇಹಿತರ ಮನೆಗಳು, ಸ್ಥಳೀಯ ಹೋಂಸ್ಟೇ, ಲಾಡ್ಜ್‍ಗಳು ಹಾಗೂ ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಹೂಡಿದ್ದರು. ಒಟ್ಟಾರೆ ಸರ್ಕಾರದ ಭಿಗಿ ಕಟ್ಟಳೆಗಳಿಂದಾಗಿ ಏಕತಾನತೆಯಿಂದ ಹೊರಬರಲು ಚಡಪಡಿಸುತ್ತಿದ್ದವರು ಪಕೃತಿಯ ಸಹಜ ಸೌಂದರ್ಯವನ್ನು ಆಸ್ವಾದಿಸಿ ಮನ ತಣಿಸಿಕೊಂಡರು.

ಅಲ್ಲದೇ ಈ ಸಂದರ್ಭದಲ್ಲಿ ಪ್ರವಾಸಿಗರು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಸೂಚಿಸಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಯನ್ನು ಅನುಸರಿಸಲೇಬೇಕು. ಎಲ್ಲಾ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ರೆಸಾರ್ಟ್ ಹಾಗೂ ಹೋಸ್ಟೇಗಳಲ್ಲಿ ರೂಂ ಸರ್ವೀಸ್‍ಗೆ ಆದ್ಯತೆ ನೀಡಬಾರದು ಹಾಗೂ ಪ್ರತ್ಯೇಕ ಮೆನುಕಾರ್ಡ್‍ಗಳನ್ನು ಎಲ್ಲರಿಗೂ ವಿತರಿಸಬೇಕು. ಸಾಮಾಜಿಕ ಅಂತರದ ಮಹತ್ವ ಹಾಗೂ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಕಡ್ಡಾಯವಾಗಿ ಇರುವಂತೆ ಹೇಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರವಾಸಿಗ ಅಚ್ಯತ್ ರಾವ್ ಅವರು ಲಾಕ್‍ಡೌನ್ ಸಡಿಲಿಕೆ ಹಾಗೂ ಕಾನೂನಿನ ಭಿಗಿ ಕಟ್ಟಳೆಗಳಲ್ಲಿ ಸಡಿಲಿಕೆ ಮಾಡಿರುವುದು ಸಂತಸ ತಂದಿದೆ. ಒತ್ತಡ ಕೆಲಸದ ನಡುವೆ ವಿಶ್ರಾಂತಿಗೆಂದು ಪ್ರಕೃತಿಯ ಸವಿಯನ್ನು ಸವಿಯಲು ತಿಂಗಳಿಗೊಮ್ಮೆ ಬೆಂಗಳೂರಿನಿಂದ ಮೂಡಿಗೆರೆಗೆ ಬರುತ್ತಿದ್ದೆವು. ಆದರೆ ಕೋರೋನಾ ಭೀತಿ ಹಾಗೂ ಸರ್ಕಾರದ ಭಿಗಿ ಜಾಗೃತಿಯಿಂದಾಗಿ ಮರಗಟ್ಟಿದ ಅನುಭವ ಉಂಟಾಗಿತ್ತು. ಇದೀಗ ಸಂತಸವಾಗಿದೆ ಎಂದು ಹೇಳಿದ್ದಾರೆ.