ಮೂಡಿಗೆರೆ : ಬಾಳೂರು ಸಮೀಪ ವಿದ್ಯುತ್ ಕಂಬಕ್ಕೆ ಟಿಂಬರ್ ಲಾರಿ ಡಿಕ್ಕಿ-4 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತ…

165
firstsuddi

ಬಣಕಲ್ : ಟಿಂಬರ್ ದಿಮ್ಮಿಯನ್ನು ತುಂಬಿದ್ದ ಲಾರಿಯೊಂದು ವಿದ್ಯುತ್ ಕಂಬಕೆ ಡಿಕ್ಕಿ ಹೊಡೆದು ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡ ಘಟನೆ ತಾಲ್ಲೂಕಿನ ಬಾಳೂರು ಗ್ರಾಮದ ಹಲಸಿನಮರ ಸಮೀಪ ನಡೆದಿದೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕಳಸದಿಂದ ಕೊಟ್ಟಿಗೆಹಾರ ಕಡೆಗೆ ಸಾಗುತ್ತಿದ್ದ ಟಿಂಬರ್ ದಿಮ್ಮಿಗಳನ್ನು ತುಂಬಿದ ಲಾರಿ ಬಾಳೂರು ಹಲಸಿನಮರದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಲಾರಿಯನ್ನು ಹಿಂತೆಗೆಯುವಾಗ ಹಿಂಬಾಗದಲ್ಲಿದ್ದ ಇನ್ನೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ವಿದ್ಯುತ್ ಕಂಬಗಳು ಹಾಗೂ ತಂತಿಗಳು ರಸ್ತೆಗೆ ಬಿದ್ದಿದೆ. ವಿದ್ಯುತ್ ಪ್ರವಾಹಿಸುತ್ತಿದ್ದ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದರಿಂದ ಕೂಡಲೇ ಬಾಳೂರು ಗ್ರಾಮಸ್ಥರಾದ ರಘುಪತಿ ಎಂಬುವವರು ಬಣಕಲ್ ಮೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಮೆಸ್ಕಾಂ ಅಧಿಕಾರಿಗಳು ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಮೆಸ್ಕಾಂ ಲೈನ್‍ಮ್ಯಾನ್‍ಗಳಾದ ಗಿರೀಶ್ ಮತ್ತು ಶೇಖರ್ ಎಂಬುವವರು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬ ಹಾಗೂ ತಂತಿಯನ್ನು ರಸ್ತೆಯಿಂದ ತೆರವುಗೊಳಿಸಿದ್ದರು. ಹಾಗೂ ಲಾರಿ ಮಾಲೀಕನಿಗೆ 20 ಸಾವಿರ ರೂ ಮೆಸ್ಕಾಂ ಇಲಾಖೆ ದಂಡ ಹಾಕಿದ್ದು, ರಾತ್ರಿ 11 ಗಂಟೆಯಿಂದ 2 ಗಂಟೆಯವರಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಂಬಗಳನ್ನು ತೆರವುಗೊಳಿಸಿದ್ದ ನಂತರ ವಾಹನಗಳು ಸಂಚರಿಸಿದವು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.