ಮೂಡಿಗೆರೆ : ಮಕ್ಕಳು ಶಾಲೆಯಲ್ಲಿ ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಯುವುದು ಅಗತ್ಯ : ಆಲ್ಬರ್ಟ್ ಡಿಸಿಲ್ವ

287
firstsuddi

ಬಣಕಲ್: ಮಕ್ಕಳು ಶಾಲೆಯಲ್ಲಿ ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಯುವುದು ಅಗತ್ಯವಾಗಿದೆ ಎಂದು ಬಣಕಲ್ ಬಾಲಿಕಾ ಮರಿಯ ಚರ್ಚ್‍ನ ಧರ್ಮಗುರು ಆಲ್ಬರ್ಟ್ ಡಿಸಿಲ್ವ ಹೇಳಿದರು.
ಬಣಕಲ್ ನಜರೆತ್ ಶಾಲೆಯಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಷಕರು ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಸಹಕರಿಸಬೇಕು. ಮಕ್ಕಳನ್ನು ಗದರಿಸಿ ಕಲಿಸುವ ಪರಿಜ್ಞಾನ ಬಿಟ್ಟು, ಪ್ರೀತಿಯಿಂದಲೇ ಅವರನ್ನು ಶಿಕ್ಷಣದ ದಾರಿಗೆ ಓಲೈಸಬೇಕು. ಆಧುನಿಕತೆ ಮಜಲಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡದೇ ಅವರ ವಿದ್ಯಾಭ್ಯಾಸದ ಕಡೆಗೆ ಪೋಷಕರು ಗಮನ ಕೊಡುವ ಅವಶ್ಯಕತೆಯಿದೆ. ಬರೀ ಶಿಕ್ಷಣವೇ ಶಿಕ್ಷೆಯಾಗಬಾರದು. ಪೋಷಕರು ಅವರಿಗೆ ಆಸಕ್ತಿಯಿರುವ ಕಲೆಯ ಬಗ್ಗೆಯೂ ಪ್ರೋತ್ಸಾಹದ ನೀರೆರೆದರೆ ಮಕ್ಕಳು ಜ್ಞಾನವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿ ಶಾಲೆಯು ಪ್ರತಿ ವರ್ಷವೂ ಹತ್ತನೇ ತರಗತಿಯಲ್ಲಿ ಶೇ100 ಫಲಿತಾಂಶ ಪಡೆಯುತ್ತಿದೆ. ಇದು ಪೋಷಕರ ಸಹಕಾರದ ಜೊತೆ ಶಿಕ್ಷಕರ ಪರಿಶ್ರಮದಿಂದ ಸಾಧ್ಯವಾಗಿದೆ. ಈ ಬಾರಿ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ, ಶಿಕ್ಷಕರಿಗೂ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರವಾಸ, ಶಾಲೆಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಸಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಸಾಂಸ್ಕೃತಿಕ ಚಟುವಟಿಕೆಯ ಜೊತೆಗೆ ಮಕ್ಕಳಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಸ್ಥೈರ್ಯದಿಂದ ಬದುಕಲು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು. 
ಶಾಲೆಯ ಮಹಾಪೋಷಕರು ಹಾಗೂ ಧಾನಿಗಳಾದ ನೊರ್ಬಟ್ ಸಲ್ದಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಶಾಲೆಯಲ್ಲಿ ಚಿಣ್ಣರ ನೃತ್ಯಗಳ ಕಲರವ ಪೋಷಕರನ್ನೂ, ನೋಡುಗರನ್ನು ನಿಬ್ಬೆರಗುಗೊಳಿಸಿದವು.