ಮೂಡಿಗೆರೆ : ಮಳೆ ಗಾಳಿ ಅಬ್ಬರ-ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಿರುಕು-ಎರಡು ದಿನ ಚಾರ್ಮಾಡಿ ಘಾಟ್‍ನಲ್ಲಿ ಸಂಚಾರ ನಿಷೇಧ…

270
firstsuddi

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ರಸ್ತೆ ಹೆದ್ದಾರಿ ಆಲೇಕಾನ್ ಜಲಪಾತದ ಸಮೀಪದ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಎರಡು ದಿನ ಚಾರ್ಮಾಡಿ ಘಾಟ್‍ನಲ್ಲಿ ಸಂಚಾರ ನಿಷೇಧಿಸಲಾಗಿದೆ.

ಗುರುವಾರ ರಾತ್ರಿ ಧಾರಾಕಾರ ಮಳೆಗೆ ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು ಇಂದು ಆಲೇಖಾನ್ ಜಲಪಾತದ ಸಮೀಪ ರಸ್ತೆ ಬಿರುಕು ಬಿಟ್ಟ ಹಿನ್ನಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಅರ್ಚನಾ ಅವರು ಬೇಟಿ ನೀಡಿದ್ದು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಎರಡು ದಿನ ಚಾರ್ಮಾಡಿ ಘಾಟ್‍ನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಬಿರುಕು ಬಿಟ್ಟ ರಸ್ತೆಯ ಭಾಗಕ್ಕೆ ಕಾಂಕ್ರೇಟ್ ಹಾಕಲಾಗುವುದು. ಎರಡು ದಿನದ ನಂತರ ಪರಿಸ್ಥಿತಿ ಅವಲೋಕಿಸಿ ಸಂಚಾರ ಪುನರಾಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾರ್ಮಾಡಿ ಘಾಟ್‍ನಲ್ಲಿ ಸಂಚಾರ ನಿಷೇಧದ ಮಾಹಿತಿ ಇಲ್ಲದೇ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು. ಗುರುವಾರ ರಾತ್ರಿಯಿಂದಲೂ ಚಾರ್ಮಾಡಿ ಘಾಟ್‍ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದ್ದು ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣನ್ನು ತೆರವುಗೊಳಸಲಾಯಿತು.

ಕೂವೆ ಗ್ರಾಮದ ಪದ್ಮಾವತಿ ಎಂಬುವವರ ಮನೆಯ ಹಿಂಬದಿಯ ಧರೆ ಕುಸಿದಿದೆ. ಬಿನ್ನಡಿಯ ಬಿ.ಎಸ್ ರಾಮಯ್ಯ ಎಂಬುವವರ ಭತ್ತದ ಗದ್ದೆಯ ಮೇಲೆ ಮಳೆ ನೀರು ನುಗ್ಗಿ ಕೆಲ ದಿನಗಳ ಹಿಂದೆ ನಾಟಿದ ಭತ್ತದ ಸಸಿಗಳು ಕೊಚ್ಚಿ ಹೋಗಿದೆ. ಕೂವೆ ಸಮೀಪದ ಗಣಪತಿ ಕಟ್ಟೆಯ ಶ್ರೀನಿವಾಸ ಹೆಬ್ಬಾರ್ ಅವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ತರುವೆಯ ಅನಿಲ್ ಆಚಾರ್ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮನೆ ಹಾನಿಯಾಗಿದೆ.
ಬಿನ್ನಡಿ ಗ್ರಾಮದ ಗಿರಿಜಮ್ಮ ಗೋಪಾಲ ಎಂಬುವವರ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ಚೇಗು ಗ್ರಾಮದ ರತ್ನ ಅವರ ಮನೆಯ ಗೋಡೆ ಕುಸಿದಿದೆ. ಸಬ್ಬೇನಹಳ್ಳಿಯ ಗಣೇಶ್ ಎಂಬುವವರ ಮನೆಯ ಹಿಂಭಾಗ ಮರ ನೆಲಕುರುಳಿ ಹಾನಿ ಸಂಭವಿಸಿದೆ.