ಮೂಡಿಗೆರೆ: ಮೂಡಿಗೆರೆ ಪಟ್ಟಣದ ಹಲವೆಡೆ ಸರ್ಕಾರದಿಂದ ನಿರ್ಮಾಣ ಮಾಡಿರುವ ಚರಂಡಿಗಳ ಮೇಲೆ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿದ್ದು ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯ ಮಹಮದ್ ಶರೀಫ್ ಅವರು ಪಟ್ಟಣ ಪಂಚಾಯತಿಗೆ ದೂರು ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಪಟ್ಟಣದ ಪ.ಪಂ. ವ್ಯಾಪ್ತಿಯ ಜೆ.ಎಂ.ರಸ್ತೆಯ ಎರಡನೇ ಕ್ರಾಸ್ನಲ್ಲಿ ರಸ್ತೆ ಪಕ್ಕದ ಚರಂಡಿ ಮೇಲೆ ಹಾಗೂ ರಸ್ತೆಗೆ ಹೊಂದಿಕೊಂಡಂತೆ ಇರುವ ಮನೆಯ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರಂಡಿಗಳ ಮೇಲೆಯೇ ಮನೆಯ ಗೋಡೆ, ಮೆಟ್ಟಿಲುಗಳು ಹಾಗೂ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ರಸ್ತೆಯು ಕಿರಿದಾಗಿರುವುದು ಅಲ್ಲದೆ, ಪೌರ ಕಾರ್ಮಿಕರು ಚರಂಡಿಗಳನ್ನು ಕ್ಲೀನ್ ಮಾಡಲು ಹರಸಾಹಸ ಪಡುವಂತಾಗಿದೆ. ಇನ್ನು ವಾಹನ ಸಂಚಾರದ ದಟ್ಟಣೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ತಿರುಗಾಟ ನಡೆಸಲು ಕಷ್ಟವಾಗಿದೆ. ಇದೇ ರೀತಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಮನೆಗಳು ನಿರ್ಮಾಣವಾಗಿದ್ದು, ಇಂಥಹ ಮನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.










