ಮೂಡಿಗೆರೆ: ರಾ.ಹೆ.173 ರಸ್ತೆಯ ಕಳಪೆ ಮಟ್ಟದ ಕಾಮಗಾರಿ : ಸಾರ್ವಜನಿಕರಿಂದ ತೀವ್ರಗೊಂಡ ಆಕ್ರೋಶ.

1956
  • ಫಸ್ಟ್ ಸುದ್ದಿ, ಸ್ಥಳೀಯವಾರ್ತೆ. ಸುಧೀರ್ ಮೊದಲಮನೆ.

ಮೂಡಿಗೆರೆ :  ರಾ.ಹೆ.173 ರಸ್ತೆ ಬಿಳಗುಳದಿಂದ ಹ್ಯಾಂಡ್ ಹ್ಯಾಂಡ್ ಪೋಸ್ಟ್ ವರೆಗಿನ ರಸ್ತೆಗಳಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ದು, ಫಸ್ಟ್ ಸುದ್ದಿ ಸೇರಿದಂತೆ ಕೆಲವು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ರಸ್ತೆ ಅವ್ಯವಸ್ಥೆಯ ಬಗ್ಗೆ ವರದಿ ಪ್ರಕಟವಾದೊಡನೆ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆಗಳಲ್ಲಿ ಉಂಟಾಗಿದ್ದ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭ ಮಾಡಿದ್ದಾರೆ.
ಆದರೆ ನಾಮಕಾವಸ್ತೆಗೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕಂಡು ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿನ ರಸ್ತೆ 3 ವರ್ಷಗಳಿಂದ ಮಾರುದ್ದದ ಗುಂಡಿಗಳಿಂದ ಕೂಡಿದ್ದು, ಪ್ರತೀ ನಿತ್ಯ ಇದೇ ದಾರಿಯಲ್ಲಿ ತಿರುಗಾಡುತ್ತಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾತ್ರ ಇಲ್ಲಿನ ಗುಂಡಿಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಮಾತ್ರ ಅರಿವು ಇರಲಿಲ್ಲ. ಆದರೆ ಪತ್ರಿಕಾ ಬಳಗದವರ ಜನಪರ ಕಾಳಜಿಯಿಂದಾಗಿ ಗುಂಡಿ ಮುಚ್ಚುವ ಕೆಲಸ ಆರಂಭವಾಗಿರುವುದು ಸಂತಸವಾದರೂ ಕಳಪೆ ಗುಣಮಟ್ಟದ ಕಾಮಗಾರಿ ತೀವ್ರ ನಿರಾಶೆ ಉಂಟುಮಾಡಿದೆ. ಈ ಬಗ್ಗೆ ಕೂಡ ಪತ್ರಿಕಾ ಬಳಗದವರು ವರದಿ ಪ್ರಕಟ ಮಾಡಿ ಎಲ್ಲರ ಗಮನ ಸೆಳೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಬ್ರಿಜೇಶ್ ಕಡಿದಾಳ್ ಅವರು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ ಇದೀಗ ಕೈಗೊಂಡಿರುವ ಕಾಮಗಾರಿ ತೀರಾ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪ ಮಾಡಿದ್ದು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಕೂಡಲೇ ಗುಂಡಿ ಮುಚ್ಚುವ ಪ್ರಹಸನ ಆರಂಭವಾಗುತ್ತದೆ. ಈಗಲೂ ಕೂಡ ಕೆಲಸ ಆರಂಭಿಸಿರುವುದು ಕೇವಲ ಕಾಗದ ಪತ್ರಗಳಲ್ಲಿ ನಮೂದು ಮಾಡಿ ಬಿಲ್ ಪಾಸ್ ಮಾಡುವುದಕ್ಕೆ ಹೊರತು ಸಾರ್ವಜನಿಕರ ಮೇಲಿರುವ ಕಾಳಜಿಯಿಂದಲ್ಲ. ಸಾರ್ವಜನಿಕರ ಎದುರಿಗೆ ಗುಂಡಿ ಮುಚ್ಚಿ ಕೆಲಸ ಮಾಡಿದ್ದೇವೆ ಎಂಬ ಪ್ರಹಸನಗಳು ನಡೆಯುವುದು ಹೊಸತೇನಲ್ಲ. ಗುಂಡಿ ಮುಚ್ಚಿರುವುದನ್ನೇ ನಮ್ಮ ನಾಯಕರುಗಳು ದೊಡ್ಡ ಸಾಧನೆ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ, ಜನತೆಯ ಬಗ್ಗೆ ಕಾಳಜಿ ಇಲ್ಲದ ಇಂಥಹ ಜನನಾಯಕರಿಗೆ ನಾಚಿಕೆ ಆಗಬೇಕು. ವರ್ಷಕ್ಕೆ ನಾಲ್ಕು ಬಾರಿ ಗುಂಡಿ ಮುಚ್ಚುವ ಕಾರ್ಯ ಮಾಡಿ ಸರ್ಕಾರದ ಹಣವನ್ನು ವ್ಯರ್ಥ ಮಾಡುವ ಬದಲು ಒಂದೇ ಬಾರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಿದರೆ ಇಂಥಹ ದುರ್ಗತಿ ಬರುತ್ತಿರಲಿಲ್ಲ. ಅಧಿಕಾರಿಗಳ ಬಳಿ ಕೆಲಸ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದಿರುವುದು ನಮ್ಮ ದುರಾದೃಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂಥಹ ವಸ್ತುನಿಷ್ಠ ವರದಿಗಳು ಇನ್ನೂ ಮೂಡಿಬರಲಿ ಎಂದುರು. ಮುಂದುವರೆದು ಮಾತನಾಡಿದ ಅವರು, ಅಧಿಕಾರಿಗಳು ಕಛೇರಿಗಳಲ್ಲಿ ತಣ್ಣಗೆ ಕುಳಿತು ರಸ್ತೆಗಳ ಬಗ್ಗೆ ಪುಟಗಟ್ಟಲೆ ವರದಿಯನ್ನು ಸರಕಾರಕ್ಕೆ ಕಳುಹಿಸಿದಂತೆ, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಅಧಿಕಾರಿಗಳು ಮಳೆಯಿಂದಾಗಿ ರಸ್ತೆಗಳೆಲ್ಲಾ ಹಾಳಾಗಿವೆ ಎಂದು ಹೇಳುತ್ತಿದ್ದಾರೆ. ಆದರೆ ಮಲೆನಾಡಿನಲ್ಲಿ ಮಳೆ ಎನ್ನುವುದು ಹೊಸತೇನಲ್ಲ. ಮಲೆನಾಡಿಗೆ ಉತ್ತಮವಾದ ರಸ್ತೆ ಅವಶ್ಯಕವಿರುತ್ತದೆ. ಉತ್ತಮವಾಗಿ ರಸ್ತೆ ನಿರ್ಮಾಣ ಮಾಡಿದರೆ ರಸ್ತೆ ಹೇಗೆ ಹಾಳಾಗುತ್ತದೆ. ವರ್ಷಕ್ಕೆ ಮೂರು ಭಾರಿ ಜೆಲ್ಲಿ ಸುರಿದು ಹಣ ನುಂಗುವ ಬದಲು ಒಂದೇ ಬಾರಿಗೆ ಉತ್ತಮ ದರ್ಜೆಯ ರಸ್ತೆ ನಿರ್ಮಾಣ ಮಾಡಿದರೆ ರಸ್ತೆಗಳು ಏಕೆ ಹಾಳಾಗುತ್ತವೆ? ಚಿಕ್ಕಮಗಳೂರಿನಲ್ಲಿ ವಿದೇಶಕ್ಕೆ ಹೋಗಬೇಕಾದ ಯುವತಿಯೊಬ್ಬಳು ಇಂಥಹ ಗುಂಡಿಗಳಿಂದಾಗಿ ಸಾವನ್ನಪ್ಪಿದ ಸಂಗತಿ ಕಣ್ಣೆದುರಿಗೆ ಇದ್ದರೂ ಬದಲಾಗದ ಅಧಿಕಾರಿಗಳ ಕಾರ್ಯಶೈಲಿ ನಿಜಕ್ಕೂ ನಾಚಿಕೆಗೇಡು. ಪ್ರತೀ ನಿತ್ಯ ತಮ್ಮ ಜೀವನ ನಿರ್ವಹಣೆಗಾಗಿ ಕೂಲಿ ನಾಲಿ ಮಾಡುವ ಕೂಲಿ ಕಾರ್ಮಿಕರು, ದಿನದ ದುಡಿಮೆಯನ್ನು ಆಧರಿಸಿರುವ ಸಾವಿರಾರು ವಾಹನ ಚಾಲಕರುಗಳು, ಶಾಲಾ ಕಾಲೇಜುಗಳಿಗೆ ಸಾಗುವ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಅನುಭವಿಸುವ ನರಕಯಾತನೆ ಜನನಾಯಕರಿಗೆ ಮತ್ತು ಅಧಿಕಾರಿಗಳಿಗೆ ಇದ್ದಿದ್ದರೆ ಉತ್ತಮವಾದ ರಸ್ತೆ ನಮ್ಮದಾಗುತ್ತಿತ್ತು. ಇಂಥಹ ಕಳಪೆ ಕಾಮಗಾರಿ ಮಾಡಿ ಕೇವಲ ಜನರ ಕಣ್ಣೊರೆಸುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ಅಸಹನೆ ಹೊರ ಹಾಕಿದರು.

ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಈ ಬಾರಿಯ ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಅಕ್ಟೋಬರ್ ತಿಂಗಳಿನವರೆಗೂ ಮಳೆ ಬರುತ್ತಿದ್ದರಿಂದ ಕೆಲಸ ಪ್ರಾರಂಭ ಮಾಡಿರಲಿಲ್ಲ. ಮೂಡಿಗೆರೆ ರಸ್ತೆಯ ಪರಿಸ್ಥಿತಿ ಅರ್ಥವಾಗುತ್ತದೆ. ಇದೀಗ ಲಭ್ಯವಿರುವ ಅನುದಾನಗಳನ್ನು ಬಳಸಿಕೊಂಡು ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಮರು ಡಾಂಬರೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಮರು ಡಾಂಬರೀಕರಣ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಒಟ್ಟಾರೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತೆಗೆ ಒಳಗಾಗುತ್ತಿರುವ ಮೂಡಿಗೆರೆಯ ಸಾರ್ವಜನಿಕರು ಮಾತ್ರ ನಿತ್ಯ ಹಿಡಿಶಾಪ ಹಾಕಿಕೊಂಡು ತಿರುಗಾಡುವ ಪರಿಸ್ಥಿತಿ ಮಾತ್ರ ದೂರವಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.