ಕೊಟ್ಟಿಗೆಹಾರ : ರೈತರಿಗೆ ಸಮರ್ಪಕವಾದ ಕೃಷಿ ಮಾಹಿತಿ ನೀಡುವ ಸಲುವಾಗಿ ಸರ್ಕಾರ ಕೃಷಿ ಅಭಿಯಾನವನ್ನು ಹಮ್ಮಿಕೊಂಡಿದೆ. ರೈತರು ಕೃಷಿ ಸೌಲಭ್ಯಗಳನ್ನು ಪಡೆದರೆ ಸಾಲದು, ಮಾಹಿತಿ ಪಡೆಯುವುದೂ ಅತ್ಯವಶ್ಯಕ ಎಂದು ಮೂಡಿಗೆರೆ ಕೃಷಿ ಸಮಾಜದ ಕಾರ್ಯದರ್ಶಿ ಪಿ.ಕೆ.ನಾಗೇಶ್ ಹೇಳಿದರು.
ಬಣಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ನಡೆದ ಕೃಷಿ ಮತ್ತು ಕೋವಿಡ್ ಕುರಿತ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ತರದ ಕೃಷಿ ಕಾರ್ಯಕ್ರಮದಲ್ಲಿ ರೈತರ ಭಾಗವಹಿಸುವಿಕೆ ತುಂಬ ಕಡಿಮೆಯಾಗಿದೆ. ಸರ್ಕಾರ ಕೃಷಿಗೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ರೈತರು ಜಾಗೃತಗೊಳ್ಳಬೇಕು. ರೈತರು ಜಾಗೃತರಾದರೆ ಕೃಷಿ ಅದಿಕಾರಿಗಳು ಜಾಗೃತರಾಗುತ್ತಾರೆ. ಕೃಷಿ ಇಲಾಖೆಯಲ್ಲಿರುವ ಸೌಲಭ್ಯಗಳು ಬರೀ ಸೌಲಭ್ಯಗಳಾಗಿ ಉಳಿಯಬಾರದು ಅವುಗಳು ಪ್ರತಿಯೊಬ್ಬರ ರೈತರ ಬಾಗಿಲಿಗೆ ತಲುಪಿ ಉಪಯೋಗವಾಗಬೇಕು .ಕೊರೊನಾದಿಂದ ರೈತರು ಕೃಷಿ ಚಟುವಟಿಕೆಗಳನ್ನು ನಿಲ್ಲಿಸಬಾರದು. ಮುಂಗಾರು ಮಳೆ ಪ್ರವೇಶವಾಗಿದೆ.ಮಳೆಯ ಪ್ರಮಾಣ ತುಸು ತಡವಾಗಿದ್ದರೂ ರೈತರು ಭತ್ತದ ಕೃಷಿಗೆ ಉತ್ಸಾಹಿಗಳಾಗಬೇಕು ಎಂದರು.
ರಾಜ್ಯ ಮಹಿಳಾ ರೈತ ಸಂಘದ ಉಪಾಧ್ಯಕ್ಷೆ ವನಶ್ರೀಲಕ್ಷ್ಮಣ್ ಗೌಡ ಮಾತನಾಡಿ, ಕೃಷಿ ಇಲಾಖೆಯು ಕೋವಿಡ್ ಸಮಯದಲ್ಲೂ ಕೃಷಿ ಮಾಹಿತಿಯನ್ನು ರೈತರ ಮನೆಗಳಿಗೆ ಮುಟ್ಟಸುವ ಕಾರ್ಯ ಮಾಡುತ್ತಿದೆ. ಸಮಾಜದ ಕಟ್ಟ ಕಡೆಯ ರೈತನಿಗೂ ಕೃಷಿ ಸೌಲಭ್ಯಗಳು ತಲುಪುವಂತಾಗಬೇಕು ಎಂಬುದು ಅಭಿಯಾನದ ಉದ್ದೇಶ.ಮಾಹಿತಿ ತಿಳಿಯದೇ ಅವರು ಸೌಲಭ್ಯ ಪಡೆಯುವ ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಣಕಲ್ ಹೋಬಳಿಯ ಪ್ರತಿ ಗ್ರಾಮಗಳಿಗೆ ಬೇಟಿ ನೀಡಿ ಕೃಷಿ ಮಾಹಿತಿ ನೀಡುವ ಅಭಿಯಾನ ಮಾಡುತ್ತಿದೆ ಎಂದರು.
ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಸತೀಶ್ ಮತ್ತಿಕಟ್ಟೆ ಮಾತನಾಡಿ, ಭತ್ತಕ್ಕೆ ಬೆಂಬಲ ಸಿಗದೇ ಹಲವಾರು ರೈತರು ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಇದಕ್ಕೆ ಮೂಲ ಕಾರಣ ಮಾಹಿತಿ ಕೊರತೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಮುಂಚೆ ನಾವು ಅದರ ಸಮಗ್ರ ಮಾಹಿತಿ ಪಡೆಯುವುದು ಅತ್ಯವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲ್ಲಿ ಬಣಕಲ್ ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಕೃಷಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಣಕಲ್ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್‍ಸ್ಪೆಕ್ಟರ್ ಕೆ.ಶಶಿ, ಗ್ರಾಮ ಪಂಚಾಯಿತಿ ಪಿಡಿಒ ಬಿ.ಎನ್.ಕೃಷ್ಣಪ್ಪ, ಸದಸ್ಯ ಬಿ.ಕೆ. ಸುರೇಶ್, ಕೃಷಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶ್ವೇತಾ, ಶೈಲಜಾ, ಗೋಪಾಲ್, ರೈತರಾದ ಜಿ.ಸಿ. ಸವಿನ್‍ಕುಮಾರ್, ಜಿ.ಆರ್.ಗೋಪಾಲ್, ಜಿ.ಬಿ.ಮಂಜುನಾಥ್, ಡಿ.ಇ.ನಾಗೇಶ್, ಅಹ್ಮದ್ ಬಾವಾ ಇದ್ದರು.










