ಮೂಡಿಗೆರೆ : ತಾಲ್ಲೂಕಿನ ತತ್ಕೊಳ ಗ್ರಾಮದ ನಿವಾಸಿಯೊಬ್ಬರು ಶಬರಿಮಲೆ ಯಾತ್ರೆಗೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಗಿರೀಶ್(38) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಇತ್ತೀಚೆಗಷ್ಟೇ ಮೂಡಿಗೆರೆಯಿಂದ 18 ಮಂದಿ ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ತೆರಳಿದ್ದರು. ದೊಡ್ಡ ಪಾದ ನಡಿಗೆ ಮಾಡುವ ಮೂಲಕ ಯಾತ್ರೆ ಕೈಗೊಂಡಿದ್ದ ಅವರು ಶಬರಿಮಲೆಯ ಅಪ್ಪಾಚ್ಚಿಮೇಡು ಎಂಬಲ್ಲಿ ಸಾಗುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು ಎನ್ನಲಾಗಿದೆ. ಮಂಗಳವಾರ ಸಂಜೆ ತತ್ಕೊಳ ಗ್ರಾಮಕ್ಕೆ ಅವರ ಪಾರ್ಥೀವ ಶರೀರವನ್ನು ತರಲಾಯಿತು. ಹಗಲು ಹೊತ್ತಿನಲ್ಲಿ ಹೆಸ್ಗಲ್ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ನಿರ್ವಹಿಸಿ, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದ ಗಿರೀಶ್ ಶ್ರಮ ಜೀವಿಯಾಗಿದ್ದರು. ಮೃತ ಗಿರೀಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.










