ಭೋಪಾಲ್: ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತನ ಪಾದ ತೊಳೆದು ಗೌರವ ಸಲ್ಲಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‌ನ ತಮ್ಮ ನಿವಾಸಕ್ಕೆ ಸಂತ್ರಸ್ತನನ್ನು ಕರೆದು ಆತನ ಕಾಲು ತೊಳೆದು, ಸನ್ಮಾನಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ.
ಆದಿವಾಸಿ ವ್ಯಕ್ತಿಯ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ರಾವತ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದಾನೆಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೋಲಾಹಲ ಎಬ್ಬಿಸಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಆರೋಪಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೇ ಆತನ ಮನೆಯನ್ನೂ ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
ಘಟನೆಗೆ ಬೇಸರ ವ್ಯಕ್ತಪಡಿಸಿರುವ ಸಿಎಂ, ವೀಡಿಯೊ ನೋಡಿ ನನಗೆ ನೋವಾಯಿತು. ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ. ಜನರು ನನಗೆ ದೇವರಿದ್ದಂತೆ ಎಂದು ಸಂತ್ರಸ್ತ ದಶಮತ್ ರಾವತ್ ಬಳಿ ಕ್ಷಮೆಯಾಚಿಸಿದ್ದಾರೆ.










