ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಬ್ರೇಕ್, ಸುಗ್ರೀವಾಜ್ಞೆ ತರಲು ಸಚಿವ ಸಂಪುಟ ಅನುಮೋದನೆ.

31

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದು, ಸಾಲ ಪಡೆದುಕೊಂಡುವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಈ ಬಡ್ಡಿ ದಂಧೆಕೋರರ ಹಾವಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮೈಕ್ರೊ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕೊನೆಗೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ತರಲು ಸಚಿವ ಸಂಪುಟದಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿಗೆ ತಡೆ ತರುವ ನಿಟ್ಟಿನಲ್ಲಿ ಹೊಸದಾಗಿ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಈಗ ಸುಗ್ರೀವಾಜ್ಞೆಗೆ ರಾಜ್ಯಪಾಲರ ಬಳಿ ಅಂಕಿತ ಪಡೆಯಲು ನಿರ್ಧರಿಸಿದೆ. ಇನ್ನು ಮೈಕ್ರೋಫೈನಾನ್ಸ್ ವಿಚಾರದ ಸುಗ್ರೀವಾಜ್ಞೆಗೆ ಸಂಬಂಧಿಸಿ ಮತ್ತೊಂದು ಹಂತದ ಸಭೆ ನಡೆಯಲಿದೆ. ಕ್ಯಾಬಿನೆಟ್ ಮುಖ್ಯಮಂತ್ರಿಗೆ ನಿರ್ಣಯ ಕೈಗೊಳ್ಳುವ ಪರಮಾಧಿಕಾರ ನೀಡಿದ್ದು, ಕೆಲವು ಅಂಶಗಳನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕೆ ಚರ್ಚೆಯ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.