ಮೊಟ್ಟೆ ಹಗರಣದ ಆರೋಪಿ ಜೊಲ್ಲೆಗೆ ಮತ್ತೆ ಸಚಿವ ಸ್ಥಾನ : ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ…

73
firstsuddi

ಉಡುಪಿ : ಗರ್ಭಿಣಿಯರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪಕ್ಕೆ ಒಳಗಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಪುನಃ ಸಚಿವ ಸ್ಥಾನ ಸಿಕ್ಕಿರುವುದು ದುರಾದೃಷ್ಟಕರ. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತವನ್ನು ರಾಜ್ಯದ ಜನತೆಗೆ ನೀಡುವ ಉದ್ದೇಶ ಬಿಜೆಪಿಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಯಲ್ಲಿ ಸ್ವಲ್ಪವಾದರೂ ನೈತಿಕತೆ ಅನ್ನುವುದು ಇದ್ದಿದ್ದರೆ ಶಶಿಕಲಾ ಜೊಲ್ಲೆ ಅವರಿಗೆ ಮಂತ್ರಿಗಿರಿ ಇಂದು ಸಿಗುತ್ತಿರಲಿಲ್ಲ. ಅವರು ನಡೆಸಿದ್ದಾರೆ ಎನ್ನಲಾಗಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಿ,ಆರೋಪ ಸುಳ್ಳೆಂದು ಸಾಬೀತಾದಲ್ಲಿ ಮತ್ತೆ ಸಂಪುಟಕ್ಕೆ ಸೇರಿಸಿಕೊಂಡರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟಂತೆ ಇನ್ನಷ್ಟು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, ಶಶಿಕಲಾ ಅವರು ಎಸಗಿರುವ ಭ್ರಷ್ಟಾಚಾರದ ಬಗ್ಗೆ ತಕ್ಷಣ ತನಿಖೆ ನಡೆಸಬೇಕು. ಈ ತನಿಖೆ ಪೂರ್ತಿಯಾಗಿ ತೀರ್ಪು ಹೊರಬರುವವರೆಗೆ ಅವರಿಗೆ ನೀಡಲಾಗಿರುವ ಮಂತ್ರಿ ಪದವಿಯನ್ನು ಅಮಾನತು ಗೊಳಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳನ್ನು ಮಹಿಳಾ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂಬುದಾಗಿ ಗೀತಾ ವಾಗ್ಳೆ ಹೇಳಿದ್ದಾರೆ.