ಮೊಹಾಲಿಯ ಗುಪ್ತಚರ ಕೇಂದ್ರ ಕಚೇರಿ ಮೇಲೆ ಗ್ರೆನೇಡ್ ದಾಳಿ…

53
firstsuddi

ಮೊಹಾಲಿ : ಪಂಜಾಬ್ ನ ಮೊಹಾಲಿಯಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ರಾಕೆಟ್ ಲಾಂಚರ್ ನಿಂದ ಗ್ರೆನೇಡ್ ದಾಳಿ ನಡೆಸಲಾಗಿದೆ. ಗ್ರೆನೇಡ್ ಸ್ಫೋಟವು ಚಿಕ್ಕ ಪ್ರಮಾಣದಲ್ಲಿ ಆಗಿದ್ದು, ಸಂಪೂರ್ಣವಾಗಿ ಕಚೇರಿಯ ಗಾಜುಗಳು ಒಡೆದು ಹೋಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಮೊಹಾಲಿಯ ಸೆಕ್ಟರ್ 77 ರಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಕಟ್ಟಡದಲ್ಲಿ ರಾತ್ರಿ 7:45ಕ್ಕೆ ಘಟನೆ ನಡೆದಿದೆ. ಮೊದಲಿಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಹೇಳಲಾಗಿತ್ತು. ಆದ್ರೆ ಮೊಹಾಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಯೋತ್ಪಾದಕರ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಫೋಟದ ನಂತರ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿತು. ಕಟ್ಟಡದ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಈ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಚೇರಿಯಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.