ಮೋದಿ ಮುಂದೆ ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ತಿರುಗೇಟು…

55
firstsuddi

ಬಳ್ಳಾರಿ : ಪ್ರಧಾನಿ ನರೇಂದ್ರ ಮೋದಿ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಮರಿ ರೀತಿ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕು ಜಿರಳೆ ಸಿದ್ದರಾಮಯ್ಯ ಇರುತ್ತಾರೆ ಎಂದು ನಾವು ಹೇಳಬಹುದು. ಆದರೆ ನಾವು ಆ ರೀತಿ ಹೇಳುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಸಿಎಂ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದರು, ಇದೀಗ ವಿಪಕ್ಷ ಪಕ್ಷ ನಾಯಕ ಆಗಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿದ್ದು, ಸಿಎಂ ಸ್ಥಾನದ ವ್ಯಕ್ತಿಯನ್ನು ನಾಯಿ ಹೋಲಿಕೆ ಮಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಮೋದಿ ಮುಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಧೈರ್ಯವಾಗಿ ಮಾತಾನಾಡುತ್ತಾರೆ. ಸಿಎಂ ಸ್ಥಾನಕ್ಕೆ ಅಗೌರವ ತೋರಿದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಹೇಳಿಕೆ ಬಿಜೆಪಿಯಿಂದ ತೀವ್ರವಾಗಿ ಖಂಡನೆಗೆ ಆಗ್ರಹ ಮಾಡುತ್ತೇನೆ. ಸೋನಿಯಾ ಮುಂದೆ ಸಿದ್ದರಾಮಯ್ಯ ತುಟಿ ಬಿಚ್ಚಲ್ಲ. ನಮ್ಮ ಸಿಎಂ ಪ್ರಧಾನಿ ಮುಂದೆ ಎಲ್ಲವೂ ಮಾತನಾಡುತ್ತಾರೆ ಎಂದರು.

ಸಿದ್ದರಾಮಯ್ಯ ಹೇಳಿದ್ದೇನು? : ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಲಿಗೆ ಹರಿಬಿಟ್ಟಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮಗೆ ಧಮ್ಮಿದ್ದರೆ, ತಾಕತ್ತಿದ್ದರೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರಿಸಿ, ಈ ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡಿ. ನಿಮಗೆ ಆ ಧೈರ್ಯ. ತಾಕತ್ತು, ಧಮ್ಮು ಎಲ್ಲಿದೆ? ನರೇಂದ್ರ ಮೋದಿಯವರ ಮುಂದೆ ನಾಯಿಮರಿಯಂತೆ ಮುದುಡಿಕೊಂಡು ಕೂರುತ್ತೀರಿ ಎಂದು ಟೀಕಿಸಿದ್ದರು.