ಮೊರ್ಬಿ ಸೇತುವೆ ದುರಂತ – ಸಾವಿನ ಸಂಖ್ಯೆ 141ಕ್ಕೆ ಏರಿಕೆ…

48
firstsuddi

ಅಹಮದಾಬಾದ್ : ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ದುರಂತದಲ್ಲಿ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ನಾಪತ್ತೆಯಾದವರಿಗಾಗಿ, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎನ್‍ಡಿಆರ್‌ಎಫ್, ವಾಯುಪಡೆ, ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.

ಮೊರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಶಿಥಿಲಗೊಂಡಿದ್ದ ಹಿನ್ನೆಲೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿತ್ತು. ನವೀಕರಣಗೊಂಡ ಸೇತುವೆಯನ್ನು ಐದು ದಿನಗಳ ಹಿಂದೆ ಉದ್ಘಾಟಿಸಲಾಗಿತ್ತು. ಮೂರು ದಿನದ ಹಿಂದೆ ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ನಿನ್ನೆ ರಜೆ ದಿನದ ಹಿನ್ನೆಲೆ ಈ ಪ್ರದೇಶದಲ್ಲಿ ಜನ ದಟ್ಟನೆ ಇತ್ತು. ಕುಸಿದಾಗ ಸೇತುವೆ ಮೇಲೆ ಸುಮಾರು 500ಕ್ಕೂ ಹೆಚ್ಚು ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ.

ಮೂರು ದಿನಗಳ ಗುಜರಾತ್ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೋರ್ಬಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ದುರಂತದ ಕುರಿತು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.