ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ: ಡಿ.ಕೆ ಶಿವಕುಮಾರ್.

38

ಬೆಂಗಳೂರು: ಯಾವ ಪವರ್ ಇಲ್ಲ, ಯಾವ ಶೇರಿಂಗ್ ಇಲ್ಲ. 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ಸರ್ಕಾರಿ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಂತರ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಇದೇ ಅವಧಿಯಲ್ಲಿ ನೀವು ಮುಖ್ಯಮಂತ್ರಿ ಆಗುತ್ತೀರಿ ಎಂಬ ವಿನಯ್ ಗುರೂಜಿ ಅವರ ಹೇಳಿಕೆ ಕುರಿತು ಕೇಳಿದಾಗ, ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ನಮ್ಮ ಸರ್ಕಾರದ ಕುರಿತು ಭವಿಷ್ಯ ನುಡಿಯುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಪವರ್ ಶೇರಿಂಗ್ ಕುರಿತು ಚರ್ಚೆ ಆಗುತ್ತಿರುವಾಗ ಈ ಹೇಳಿಕೆ ಬಂದಿದೆ ಎಂದು ಕೇಳಿದಾಗ, ಯಾವ ಪವರ್ ಇಲ್ಲ, ಶೇರು ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂದು ಹೇಳಿದರು. ಜಾತಿ ಗಣತಿ ವಿರೋಧಿಸಿ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರ ಸಭೆ ನಡೆಯುವುದೇ ಎಂದು ಕೇಳಿದಾಗ, ನನಗೆ ಗೊತ್ತಿರುವ ವರದಿ ಪ್ರಕಾರ ಈ ಕುರಿತು ಯಾವುದೇ ಸಭೆ ಇಲ್ಲ. ಅದರ ಅಗತ್ಯವೂ ಕೂಡ ಇಲ್ಲ. ಸಿಎಂ ಸಿದ್ದರಾಮಯ್ಯನವರು ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಅಲ್ಲಿ ನಾವು ಚರ್ಚೆ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.