ಬೆಂಗಳೂರು: ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀಡಿಯೋ ಸಂವಾದ ನಡೆಸಿದರು. ಯು.ಎ.ಇ. ಯಲ್ಲಿ ತೊಂದರೆಗೆ ಸಿಲುಕಿರುವ ಅನಿವಾಸಿ ಕನ್ನಡಿಗರು ಮಾತನಾಡಿ ದುಬೈ ನಿಂದ ಬರುವವರಿಗೆ ಕೂಡಲೇ ವಿಮಾನ ವ್ಯವಸ್ಥೆ, ಅದರಲ್ಲೂ ಮಂಗಳೂರಿಗೆ ಹೆಚ್ಚಿನ ವಿಮಾನ ವ್ಯವಸ್ಥೆ ಕಲ್ಪಿಸಬೇಕು.
ಈಗಾಗಲೇ ಯು.ಎ.ಇ ನಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ರಾಜ್ಯಕ್ಕೆ ಬರಲು ಸಾಧ್ಯವಾಗದೇ ಇದ್ದವರಿಗೆ ಆರ್ಥಿಕವಾಗಿ ನೆರವಾಗಬೇಕು. ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಯು.ಎ.ಇ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ವೀಸಾ ಅವಧಿ ಮುಗಿದ ನಿರೋದ್ಯೋಗಿಗಳು, ರೋಗಿಗಳು ಇತರೆ ಕಾರಣಗಳಿಂದ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕರೆತರಲು ಸರ್ಕಾರ ಈಗಾಗಲೇ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಸ್ ಕರೆತರಲು ವಿಮಾನದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ. ಅನಿವಾಸಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.










