ಯುಜಿಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರ – ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

119
firstsuddi

ಚಿಕ್ಕಮಗಳೂರು : ನಗರದ ಯುಜಿಡಿ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅದರ ವಿರುದ್ದ ಕೂಡಲೇ ತನಿಖೆ ನಡೆಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಮೀಲ್ ಅಹಮದ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಛೇರಿ ಸಹಾಯಕ ಚಂದ್ರಶೇಖರ್ ಅವರನ್ನು ಇಂದು ಭೇಟಿ ಮಾಡಿದ ಜಮೀಲ್ ಅಹಮದ್ ಈ ಸಂಬಂಧ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಗರದಲ್ಲಿ ಯುಜಿಡಿ ಕಾಮಗಾರಿ ಪ್ರಾರಂಭವಾಗಿ 10 ವರ್ಷ ಕಳೆದಿದೆ. ಈ ಯೋಜನೆ 53.80 ಲಕ್ಷ ರೂಪಾಯಿಗಳಿಗೆ ಅನುಮೋದನೆಗೊಂಡಿದ್ದು, ಇದೀಗ 87 ಲಕ್ಷ ರೂಪಾಯಿ ವೆಚ್ಚವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಯುಜಿಡಿ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ, ಕಳಪೆ ಕಾಮಗಾರಿ ಮಾಡುವ ಮೂಲಕ ನಗರದ ಜನತೆಯನ್ನು ವಂಚಿಸಲಾಗಿದೆ, ಈ ಬಗ್ಗೆ ನಾವು ಹಲವಾರು ಬಾರಿ ಹೋರಾಟ ಮಾಡಿದರೂ ನ್ಯಾಯಾಲಯ, ಲೋಕಾಯುಕ್ತ ಮುಂತಾದ ಕಡೆ ಭ್ರಷ್ಟಾಚಾರವನ್ನು ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇದೀಗ ನಗರಸಭೆ ಅಧ್ಯಕ್ಷರು ನಗರದ 15.700 ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ಮುಂದಾಗಿದ್ದು, ಈ ಕಾಮಗಾರಿಗೆ 27 ಕೋಟಿ ರೂ ವೆಚ್ಚವಾಗಿದೆ ಎಂದು ಹೇಳಿದ್ದಾರೆ.ಆದರೆ ನಗರದ ಪ್ರತಿ ಮನೆಯವರು 15 ರಿಂದ 20 ಸಾವಿರ ರೂ ನೀಡಿ ಈ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಯುಜಿಡಿ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೂಡಲೇ ತಜ್ಞ ಇಂಜಿನಿಯರ್ ಅವರಿಂದ ತನಿಖೆ ನಡೆಸಿ ನಗರದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೇಸ್ ಮುಖಂಡ ಮಹಮ್ಮದ್ ಯೂಸೂಫ್ ಹಾಜರಿದ್ದರು.