ಯೆಮೆನ್‍ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ.

32

ನವದೆಹಲಿ: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭಾರತ ಮಂಗಳವಾರ ಪ್ರಕಟಿಸಿದೆ. ಯೆಮೆನ್ ಪ್ರಜೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಯೆಮನ್‍ನಲ್ಲಿ ನಿಮಿಷಾ ಪ್ರಿಯಾ ಅವರಿಗೆ ಶಿಕ್ಷೆ ವಿಧಿಸಿರುವ ಬಗ್ಗೆ ತಿಳಿದುಬಂದಿದೆ. ಶ್ರೀಮತಿ ಪ್ರಿಯಾ ಅವರ ಕುಟುಂಬವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ. ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ಅವರ ತಾಯಿ ಪ್ರೇಮಾ ಕುಮಾರಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಯೆಮೆನ್ ಮೂಲದ ಎನ್‍ಆರ್‍ಐ ಸಾಮಾಜಿಕ ಕಾರ್ಯಕರ್ತರ ಸಂಘಟನೆಯಾದ ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್ ಸಹಾಯದಿಂದ ಕೊಲೆಗೀಡಾದವರ ಕುಟುಂಬಕ್ಕೆ ರಕ್ತದ ಹಣ ಪಾವತಿಸುವ ಬಗ್ಗೆ ಮಾತುಕತೆ ನಡೆಸಲು ಅವರು ಯೆಮನ್ ರಾಜಧಾನಿ ಸನಾಗೆ ಪ್ರಯಾಣಿಸಿದ್ದರು.