ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ರಸ್ತೆ, ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ, ಆದರೆ ಲವ್ ಜಿಹಾದ್ ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ನಿನ್ನೆ ನಗರದಲ್ಲಿ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ, ಚರಂಡಿಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಡಿ. ನಿಮಗೆ ನಿಮ್ಮ ಮಕ್ಕಳ ಭವಿಷ್ಯದ ಚಿಂತೆಯಿದ್ದರೆ ಲವ್ ಜಿಹಾದ್ ನಿಲ್ಲಿಸಬೇಕು. ಲವ್ ಜಿಹಾದ್ ತೊಡೆದು ಹಾಕಲು ಬಿಜೆಪಿ ಬೇಕು. ಗೋಹತ್ಯೆ ವಿರುದ್ಧ ಕಾನೂನು ತಂದಿದ್ದು, ಮತಾಂತರದ ವಿರುದ್ಧ ಕಾನೂನು ತಂದದ್ದು ಬಿಜೆಪಿ, ಲವ್ ಜಿಹಾದ್ ವಿರುದ್ಧ ಕಾನೂನು ತರುವುದು ಬಿಜೆಪಿಯೇ ಎಂದು ಹೇಳಿದ್ದಾರೆ.
ಪಿಎಫ್‍ಐ ನಿಷೇಧ ಆಗದಿದ್ದರೆ ಬಿಜೆಪಿ ನಾಯಕರು ಬದುಕುಳಿಯುತ್ತಿರಲಿಲ್ಲ. ಅವರ ಫೋಟೋಗಳಿಗೆ ಹಾರ ಹಾಕಬೇಕಿತ್ತು. ಪಿಎಫ್‍ಐ ಹಾಗೂ ಕೆಎಫ್‍ಡಿ ನಿಷೇಧದ ಮೂಲಕ ರಾಷ್ಟ್ರಭಕ್ತರಿಗೆ ಒಳಿತಾಯಿತು. ಇದನ್ನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಇಲ್ಲದಿದ್ದರೆ ಹಿಂದೂಗಳ ಸರಣಿ ಹತ್ಯೆಗಳು ನಡೆಯುತ್ತಿತ್ತು ಎಂದರು.
ಡಿಕೆಶಿ ಮುಖ್ಯಮಂತ್ರಿ ಆದ್ರೆ ಎಲ್ಲಾ ಭಯೋತ್ಪಾದಕರು ಮತ್ತೆ ರಸ್ತೆಗೆ ಬರ್ತಾರೆ. ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ, ಭಯೋತ್ಪಾದನೆಗೆ ಮತ್ತೊಂದು ಹೆಸರು ಎಂದು ಕಾಂಗ್ರೆಸ್ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.










