ಚುನಾವಣಾ ರಾಜಕೀಯಕ್ಕೆ ಶಾಸಕ ತನ್ವೀರ್ ಸೇಠ್ ನಿವೃತ್ತಿ…

60
firstsuddi

ಮೈಸೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದೆ. ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕರಾಗಿರುವ ತನ್ವೀರ್ ಸೇಠ್, ಅನಾರೋಗ್ಯದ ಕಾರಣ ನೀಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದಾರೆ. 

ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ. ಆದ್ರೆ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜಕೀಯ ನಿವೃತ್ತಿ ವಿಷಯ ತಿಳಿಯುತ್ತಿದ್ದಂತೆಯೇ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ದಂಡು ಮೈಸೂರಿನಲ್ಲಿರುವ ತನ್ವೀರ್ ಸೇಠ್ ನಿವಾಸದ ಮುಂದೆ ಜಮಾಯಿಸಿದ್ದು, ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೆ ತನ್ವೀರ್ ಕಾಲಿಗೆ ಬಿದ್ದು ನಿರ್ಧಾರ ಬದಲಾಯಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇನ್ನು ಬೆಂಬಲಿಗನೋರ್ವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

2019ರ ನವೆಂಬರ್ 17ರ ರಾತ್ರಿ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.