ನವದೆಹಲಿ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರೋಹಿತ್ ಜೋಶಿ ಕಳೆದ ವರ್ಷ ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ನಿನ್ನೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದು, ದೆಹಲಿ ಪೊಲೀಸರು ರೋಹಿತ್ ಜೋಶಿ ವಿರುದ್ಧ ಝೀರೋ ಎಫ್ಐಆರ್ ದಾಖಲಿಸಿದ್ದಾರೆ.
ಈ ಸಂಬಂಧ ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 376(ಅತ್ಯಾಚಾರ), 328(ಅಪರಾಧ ಮಾಡುವ ಉದ್ದೇಶದಿಂದ ನೋವುಂಟು ಮಾಡುವುದು, ಇತ್ಯಾದಿ), 312(ಗರ್ಭಪಾತಕ್ಕೆ ಕಾರಣ), 366(ಅಪಹರಣ, ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು ಇತ್ಯಾದಿ), 377(ಅಸ್ವಾಭಾವಿಕ ಅಪರಾಧಗಳು) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವರ ಪುತ್ರ ಫೇಸ್ ಬುಕ್ ಮೂಲಕ ನನಗೆ ಕಳೆದ ವರ್ಷ ಪರಿಚಯವಾಗಿದ್ದರು. ನಾವು ಜೈಪುರದಲ್ಲಿ ಭೇಟಿಯಾಗಿದ್ದೆವು. ನಂತರ ನನ್ನನ್ನು ಜನವರಿ 8, 2021ರಂದು ಜೈಪುರದ ಸವಾಯಿ ಮಾಧವ್ ಪುರಕ್ಕೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ರಾತ್ರಿ ನನಗೆ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ಮರುದಿನ ಬೆಳಗ್ಗೆದ್ದಾಗ ನಾನು ನಗ್ನವಾಗಿರುವ ಫೋಟೋ ಮತ್ತು ವಿಡಿಯೋವನ್ನು ಅವರು ನನಗೆ ತೋರಿಸಿದರು. ನಾನು ಅಳುವುದಕ್ಕೆ ಶುರು ಮಾಡಿದೆ ಎಂದು ಯುವತಿ ತಿಳಿಸಿದ್ದಾಳೆ.
ಮತ್ತೊಮ್ಮೆ ಭೇಟಿಯಾದ ವೇಳೆ ರೋಹಿತ್ ಜೋಶಿ ದೆಹಲಿಯಲ್ಲಿ ನನ್ನ ಮೇಲೆ ದೌರ್ಜನ್ಯವೆಸಗಿದ್ದ. ನಾವು ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ನಾವಿಬ್ಬರು ಗಂಡ, ಹೆಂಡತಿ ಎಂದು ಅವರು ನಮೂದಿಸಿದ್ದರು. ನಂತರ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದರು. ನಂತರ ಕೊಠಡಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಅವರು ನನ್ನನ್ನು ನಿಂದಿಸುವುದಕ್ಕೆ ಶುರು ಮಾಡಿದರು. ನನ್ನ ಮೇಲೆ ಹಲ್ಲೆ ಮಾಡುವುದಾಗಿಯೂ, ನನ್ನ ನಗ್ನ ದೃಶ್ಯ ಸೆರೆ ಹಿಡಿಯುವುದಾಗಿಯೂ ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ವಿಡಿಯೋವನ್ನು ಅಪ್ಲೋಡ್ ಮಾಡಿ ವೈರಲ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು ಕಳೆದ ವರ್ಷದ ಆಗಸ್ಟ್ 11ರಂದು ನಾನು ಗರ್ಭವತಿಯಾಗಿದ್ದೆ. ನನಗೆ ಅವನು ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ. ಆದರೆ ನಾನು ತೆಗೆದುಕೊಳ್ಳಲಿಲ್ಲ ಎಂದು ಹೇಳಿರುವುದು ಎಫ್ ಐಆರ್ ವಿವರವಾಗಿ ಉಲ್ಲೇಖಿಸಲಾಗಿದೆ.










