ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಂಬಿಕಾಪತಿ ಅವರಿಗೆ ನಿನ್ನೆ ಸಂಜೆ 6:40 ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಆರ್. ಟಿ.ನಗರದ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ, ಪತಿ ಆರ್.ಅಂಬಿಕಾಪತಿ ಮತ್ತು ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್ ಫ್ಯ್ಲಾಟ್ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಅಂಬಿಕಾಪತಿಯ ಬೆಡ್ ರೂಮ್ನ ಮಂಚದ ಕೆಳಗೆ 23 ಬಾಕ್ಸ್ನಲ್ಲಿ 500 ರೂ. ಮುಖಬೆಲೆಯ 42 ಕೋಟಿ ರೂ. ಕಂತೆ ಕಂತೆ ಹಣ ಪತ್ತೆಯಾಗಿತ್ತು. ಈ ಪ್ರಕರಣದಿಂದ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ತೀವ್ರ ತಿಕ್ಕಾಟವೂ ಶುರುವಾಗಿತ್ತು. ಈ ಘಟನೆಯಾದ ತಿಂಗಳಲ್ಲೇ ಅಂಬಿಕಾಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಹೃದಯಾಘಾತಕ್ಕೆ ಒಳಗಾಗಿ ಅಂಬಿಕಾಪತಿ ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಅಂಬಿಕಾಪತಿ ಅವರ ಪಾರ್ಥಿವ ಶರೀರವನ್ನು ಸುಲ್ತಾನಪಾಳ್ಯದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಂತ್ಯಕ್ರಿಯೆ ಇಂದು ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.










