ಚಿಕ್ಕಮಗಳೂರು: ರಾಜ್ಯ ಸರ್ಕಾರ ಏಕಾಏಕಿ ಜಾರಿಗೊಳಿಸಿರುವ ವಿದ್ಯುತ್ ದರ ಹೆಚ್ಚಳವನ್ನು ಹಿಂಪಡೆಯಬೇಕು ಎಂದು ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಚೇಂಬರ್ ಆಫ್ ಕಾಮರ್ಸ್) ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರನ್ನು ನಿನ್ನೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸ್ಥೆಯ ಪದಾಧಿಕಾರಿಗಳು, ಯಾರ ಗಮನಕ್ಕೂ ತಾರದೇ ವಿದ್ಯುತ್ ದರವನ್ನು ಗೌಪ್ಯವಾಗಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದರು.
ಕೊರೋನಾ ಸಂದರ್ಭದಲ್ಲಿ ಆದ ಲಾಕ್ ನಿಂದ ಅನುಭವಿಸಿದ ನಷ್ಟ ಮತ್ತು ಅದರಿಂದ ಉಂಟಾದ ಸಮಸ್ಯೆಗಳಿಂದ ರಾಜ್ಯದ ಮತ್ತು ಜಿಲ್ಲೆಯ ಕೈಗಾರಿಕೆಗಳು ಇನ್ನೂ ಹೊರ ಬಂದಿಲ್ಲ. ದುಬಾರಿ ವಿದ್ಯುತ್ ಶುಲ್ಕವನ್ನು ಪಾವತಿಸಲಾಗದೆ, ರಾಜ್ಯಾದ್ಯಂತ ಸಾವಿರಾರು ಕೈಗಾರಿಕೆಗಳು ಈಗಾಗಲೇ ಮುಚ್ಚಿವೆ ಎಂದು ಹೇಳಿದರು.
ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ವಿದ್ಯುತ್ ದರವನ್ನು ಮನಸ್ಸಿಗೆ ಬಂದಂತೆ ಏರಿಸಿದರೆ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕೈಗಾರಿಕೆಗಳು ವಾಣಿಜ್ಯೋದ್ಯಮಿಗಳು ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.
ಕೈಗಾರಿಕೆಗಳು ಮತ್ತು ವಾಣಿಜ್ಯೋದ್ಯಮಿಗಳನ್ನು ಉಳಿಸುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ಹೆಚ್ಚಿಸಿರುವ ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು, ಹಿಂದಿನ ದರವನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮಹೇಶ್, ಉಪಾಧ್ಯಕ್ಷ ಶಾಂತಾರಾಮ್ ಹೆಗಡೆ, ಕಾರ್ಯದರ್ಶಿ ವಿಜಯೇಂದ್ರ, ಜಂಟಿ ಕಾರ್ಯದರ್ಶಿ ಶಿವಣ್ಣ ಹಾಜರಿದ್ದರು.










