ಚಿಕ್ಕಮಗಳೂರು : ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ಬ್ಯಾಂಕ್ ಉದ್ಯೋಗಿಗಳ ಮೇಲಿದೆ ಎಂದು ಸಾಹಿತಿ, ವಿಮರ್ಶಕ ಡಾ. ಹೆಚ್.ಎಸ್ ಸತ್ಯನಾರಾಯಣ ಹೇಳಿದರು.
ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಿದ್ದ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡಿನ ಜನತೆ ಯಾವುದೇ ಕಚೇರಿಗಳಿಗೆ ಪ್ರತಿನಿತ್ಯ ಹೋಗುವುದಿಲ್ಲ ಯಾವಾಗಲೋ ಒಮ್ಮೆ ಮಾತ್ರ ಹೋಗುತ್ತಾರೆ. ಆದರೆ, ಬ್ಯಾಂಕುಗಳಿಗೆ ವ್ಯವಹಾರಕ್ಕಾಗಿ ಸಾಮಾನ್ಯವಾಗಿ ಪ್ರತಿನಿತ್ಯ ಹೋಗುತ್ತಾರೆ ಹಾಗಾಗಿ ಅಲ್ಲಿ ಕನ್ನಡದಲ್ಲಿ ವ್ಯವಹರಿಸಿದರೆ ಮಾತ್ರ ರಾಜ್ಯದಲ್ಲಿ ಮಾತೃ ಭಾಷೆ ಉಳಿಯುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಬ್ಯಾಂಕುಗಳಲ್ಲಿ ಅನ್ಯ ಭಾಷಿಕ ಉದ್ಯೋಗಿಗಳಿದ್ದು, ಅವರಿಗೆ ಕನ್ನಡ ಬಾರದಿರುವುದರಿಂದಾಗಿ ಸಾಮಾನ್ಯ ಜನ ಮಾತೃಭಾಷೆ ಬಿಟ್ಟು ಅನ್ಯ ಭಾಷೆ ಕಲಿಯುವಂತಾಗಿದೆ. ಇದರಿಂದಾಗಿ ನಾಡಿನಲ್ಲಿ ಕನ್ನಡತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಬೇರೆ ರಾಜ್ಯಗಳಿಂದ ಬಂದು ಇಲ್ಲಿನ ಬ್ಯಾಂಕುಗಳಲ್ಲಿ ಕೆಲಸ ಮಾಡುವವರು ನಾಡಿನ ನೀರು ಗಾಳಿ ಸೇರಿದಂತೆ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವಂತೆ ಕನ್ನಡವನ್ನೂ ಪ್ರೀತಿಯಿಂದ, ಆಸಕ್ತಿಯಿಂದ ಕಲಿಯಬೇಕು. ಕನ್ನಡದಲ್ಲಿ ವ್ಯವಹರಿಸುವ ಮೂಲಕ ರಾಜ್ಯದಲ್ಲಿ ಮಾತೃ ಭಾಷೆಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಸಾಹಿತ್ಯಕ್ಕೆ ಹಿತವನ್ನು ಕೊಡುವಂತಹ ಗುಣವಿದೆ. ಆ ಕಾರಣಕ್ಕಾಗಿ ಎಲ್ಲರೂ ತಮ್ಮನ್ನು ತಾವು ಸಾಹಿತ್ಯಕ್ಕೆ ತೆರೆದುಕೊಳ್ಳಬೇಕು ಎಂದ ಅವರು, ಬದುಕಿನಲ್ಲಿ ಸೋತು ಹೋಗಿರುವವರಿಗೆ ಖಿನ್ನತೆಗೊಳಗಾದವರಿಗೆ ದುರ್ಬಲರಿಗೆ ಅದರಿಂದ ಪಾರು ಮಾಡುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಕನ್ನಡ ಸಾಹಿತ್ಯ ಲೋಕದ ಹಾಸ್ಯ ಪ್ರಸಂಗಗಳನ್ನು ಮತ್ತು ಬೀಚಿ ದುಂಡಿರಾಜ್ ಸೇರಿದಂತೆ ಅನೇಕ ಸಾಹಿತಿಗಳ ಚುಟುಕುಗಳನ್ನು, ಹಾಸ್ಯ ಸನ್ನಿವೇಶಗಳನ್ನು ಹೇಳುವ ಮೂಲಕ ಸಭಿಕರನ್ನು ನಗೆಗಳಲ್ಲಿ ತೇಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಡಿ.ಅನಿಲ್ಕುಮಾರ್ ತಮ್ಮ ಬ್ಯಾಂಕಿನಲ್ಲಿರುವ ಅನ್ಯಭಾಷಿಗರು ಕಡಿಮೆ ಅವಧಿಯಲ್ಲಿ ಕನ್ನಡವನ್ನು ಕಲಿತು ಗ್ರಾಹಕರೊಂದಿಗೆ ಅದರಲ್ಲೇ ವ್ಯವಹರಿಸುತ್ತಿದ್ದು ಮುಂದಿನ ದಿನಗಳಲ್ಲಿ ಕನ್ನಡವನ್ನು ಇನ್ನೂ ಹೆಚ್ಚು ಬಳಕೆಗೆ ತರಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಎಲೆಮರೆ ಕಾಯಿಯಂತಿರುವ ಸಾಹಿತಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ಪ್ರತಿವರ್ಷ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭಕ್ಕೆ ಅನುವು ಮಾಡಿಕೊಟ್ಟ ಬ್ಯಾಂಕ್ ಅಧಿಕಾರಿಗಳು ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಚುಟುಕು ಸಾಹಿತಿ ಹುಣಸೆಹಳ್ಳಿ ರಾಜಪ್ಪಗೌಡಅವರಿಗೆ ಈ ಸಾಲಿನ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ವಿಮರ್ಶಕಡಾ. ಹೆಚ್ಎಸ್ ಸತ್ಯನಾರಾಯಣ ಸಮಾರಂಭದಲ್ಲಿ ಪ್ರಧಾನ ಮಾಡಿದರು.
ಪ್ರಶಸ್ತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಹುಣಸೆಹಳ್ಳಿ ರಾಜಪ್ಪಗೌಡ ತವರಿನಲ್ಲಿ ತಮಗೆ ದೊರೆತಿರುವ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಸ್ಪೂರ್ತಿ ತಂದಿದೆ ಎಂದರು.
ಇದೇ ವೇಳೆ ಕನ್ನಡ ಕಲಿ ಕನ್ನಡ ಉಲಿ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿಜೇತರಿಗೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಎಸ್.ಟಿ.ವಿನಯ್ಕುಮಾರ್ ಬಹುಮಾನ ವಿತರಿಸಿದರು. ಭೂಮಿಕಾ ಟಿವಿಯ ಮುಖ್ಯಸ್ಥ ಅನಿಲ್ ಆನಂದ್ ಶಿಕ್ಷಕ ಶಿವನಂಜೇಗೌಡ ಉಪಸ್ಥಿತರಿದ್ದರು.










