ಬೆಂಗಳೂರು : ಬಿಜೆಪಿ ಕಚೇರಿಯಲ್ಲಿ ಇಂದು ಅರುಣ್ ಸಿಂಗ್ ಅವರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಅರುಣ್ ಸಿಂಗ್ ಅವರಿಗೆ ಪಕ್ಷದ ವಸ್ತುಸ್ಥಿತಿಯನ್ನು ಆಳವಾಗಿ ತಿಳಿಸಿದ್ದೇನೆ. ನಾನು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಮೊದಲಿನ ಶಕ್ತಿ ಇಲ್ಲ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಆಗಲಿ ಎಂಬ ಸಲಹೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ವಿವರಿಸಿದ್ದೇನೆ ಎಂದು ಹೇಳಿದರು.
ಹೈಕಮಾಂಡ್ ಎಸ್ ಅಂದ್ರೆ ರಾಜೀನಾಮೆಗೆ ಸಿದ್ಧ ಎಂದು ಖುದ್ದು ಬಿಎಸ್ ವೈ ಅವರೇ ಹೇಳಿದ್ದಾರೆ. ಆ ಪ್ರಕಾರ ಅವರು ಪಕ್ಷದಲ್ಲಿ ಮಾರ್ಗದರ್ಶಕರಾಗಿ ಮುಂದುವರಿಯಲಿ. ಬಿಜೆಪಿಯಲ್ಲಿ ಸಾಕಷ್ಟು ಬೇರೆ ನಾಯಕರಿದ್ದಾರೆ, ಬೇರೆಯವರಿಗೆ ಬೆಳೆಯಲು ಯಡಿಯೂರಪ್ಪನವರು ಅವಕಾಶ ನೀಡಲಿ. ವೀರಶೈವ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೆ ಅವಕಾಶ ಮಾಡಿಕೊಡಲಿ. ಮಠಾಧಿಪತಿಗಳು ಬಸವತತ್ವ ಮೀರಿ ಹೋಗಬಾರದು. ಪಂಚಮಸಾಲಿಸಮುದಾಯದವರನ್ನೇ ಸಿಎಂ ಮಾಡಲಿ. ಮುರುಗೇಶ್ ನಿರಾಣಿ, ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ ಇದ್ದಾರೆ. ಈ ಪೈಕಿ ಯಾರಿಗಾದರು ಕೊಡಿ ಎಂದಿದ್ದೇನೆ. ಇದಕ್ಕೆ ಅರುಣ್ ಸಿಂಗ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.










