ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ನೈಟ್ ಕರ್ಫ್ಯೂ ಇಲ್ಲ : ಸಿ.ಎಸ್. ರವಿಕುಮಾರ್.

126
firstsuddi

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಇಲ್ಲ. ಲಾಕ್ ಡೌನ್ ಇಲ್ಲದಿದ್ದರೂ ಕೊರೊನಾ ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ನಿಯಂತ್ರಣ ಹಿನ್ನಲೆ ಇಂದು ಕ್ಯಾಬಿನೆಟ್ ಕಾರ್ಯದರ್ಶಿಗಳ ಸಭೆ ಬಳಿಕ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವರು, ಮಹಾರಾಷ್ಟ್ರ, ಪಂಜಾಬ್ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಸೋಂಕು ಹೆಚ್ಚಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸೋಂಕು ತಡೆಗೆ ನಿಗಾವಹಿಸಬೇಕೆಂದು ಸಲಹೆ ನೀಡುವುದರ ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ, ನಿಯಮಗಳ ಬಿಗಿ ಪಾಲನೆಗೆ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದರು.

ಹೆಚ್ಚು ಜನರಿರುವ ಕಡೆ ಲಸಿಕೆ ಹಾಕಲು ನಿರ್ಧರಿಸಿದ್ದು, ಕೈಗಾರಿಕೆ, ಐಟಿ ಸಂಸ್ಥೆಗಳಿಗೆ ಹೋಗಿ ಲಸಿಕೆ ಹಾಕಿಸಲು ಕ್ರಮ ವಹಿಸಲಾಗಿದೆ. ಬೆಂಗಳೂರು, ಮೈಸೂರು, ಕಲಬುರ್ಗಿ, ಬೀದರ್ ಸೇರಿ ಹಲವು ಕಡೆ ಸೋಂಕು ಹೆಚ್ಚಾಗುತ್ತಿದ್ದು,. ಈಗಾಗಲೇ ಜಾತ್ರೆ, ಧಾರ್ಮಿಕ ಉತ್ಸವಗಳನ್ನು ನಿಯಂತ್ರಿಸಿದ್ದೇವೆ 6-9 ತರಗತಿಗಳನ್ನು ಹದಿನೈದು ದಿನ ಬಂದ್ ಮಾಡಲಾಗಿದೆ ಎಂದರು.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ರಾಜ್ಯದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗಿಯಾಗಿದ್ದರು. ಸಭೆಯಲ್ಲಿ ರಾಜ್ಯದ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದಾರೆ. ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ನೆರೆಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಥಿತಿ ಉತ್ತಮವಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಯಂತ್ರಿಸುವ ಅಗತ್ಯ ಇಲ್ಲ. ಇದರ ಬದಲಾಗಿ ಜನಸಂದಣಿಗೆ ಬ್ರೇಕ್ ಹಾಕಬೇಕಾದ ಅನಿವಾರ್ಯ ಇದೆ ಎಂದು ಸಿ.ಎಸ್ ರವಿಕುಮಾರ್ ಅವರು ವಿವರಿಸಿದ್ದಾರೆ.