ಬೆಂಗಳೂರು : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾತ್ರೋರಾತ್ರಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದೆ. ತಡರಾತ್ರಿ 11.24ಕ್ಕೆ ಆಯ್ಯವ್ಯಯ ಮಂಡನೆ ಆಗಿರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ.
10,480 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದಿನೇನಿ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಿದರು. ಒಟ್ಟಾರೆ ಬಜೆಟ್ ನ ಶೇ.76ರಷ್ಟು ಅನುದಾನ ನಿರ್ವಹಣಾ ಶುಲ್ಕ, ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ರೂ., ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ ರೂ., ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ರೂ., ಆರೋಗ್ಯ ವಲಯಕ್ಕೆ 75 ಕೋಟಿ ರೂ. ಮೀಸಲಿಡಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತೆ ತುಳಸಿ ಮದಿನೇನಿ ಬಜೆಟ್ ಮಂಡನೆಗೆ ಮುನ್ನ ಮ್ಯಾರಥಾನ್ ಮೀಟಿಂಗ್ ನಡೆಸಿದ್ದಾರೆ. ನಿನ್ನೆ ಸಿಎಂ ಸಹ ಪಾಲಿಕೆ ಅಧಿಕಾರಿಗಳ ಜೊತೆ ಕಡೆಯ ಸುತ್ತಿನ ಸಭೆ ನಡೆಸಿದ್ದಾರೆ. ಇದಾದ ಬಳಿಕ ಬಿಬಿಎಂಪಿ ಬಜೆಟ್ ಮಂಡನೆಗೆ ಮುಂದಾಗಿದೆ. ಮಾ 30 ರಂದು ಬಜೆಟ್ ಮಂಡನೆ ಪ್ಲ್ಯಾನ್ ನಡೆದಿತ್ತು. ಆದರೆ ಎಲೆಕ್ಷನ್ ಬಜೆಟ್ ಎಂಬ ಕಾರಣಕ್ಕೆ ಜನಪ್ರತಿನಿಗಳ ಅಭಿಪ್ರಾಯ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಇದೀಗ ಬಿಬಿಎಂಪಿ ಕದ್ದು ಮುಚ್ಚಿ ಬಜೆಟ್ ಮಂಡನೆ ಮಾಡಿದೆ.










