ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ಮಾಡುತ್ತಿದ್ದಾರೆ : ಡಿಕೆಶಿ.

86
firstsuddi

ಬೆಂಗಳೂರು : ಅನ್ನದಾತ ತನ್ನ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾನೆ. ಕೇಂದ್ರ ಸಚಿವ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರನ್ನು ರೈತರನ್ನು ಕೊಲೆ ಮಾಡಲಾಗಿದೆ. ಈ ದೇಶ ಯಾವ ಕಡೆ ಹೋಗುತ್ತಿದೆ ಎಂಬ ಆತಂಕ ಆಗುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇದು ಕೇವಲ ನಾಲ್ವರು ರೈತರ ಕೊಲೆ ಅಲ್ಲ. ಇಡೀ ದೇಶದ ರೈತರ ಕೊಲೆ. ಪ್ರಜಾಪ್ರಭುತ್ವದ ಕೊಲೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಭಾನುವಾರ ಮಧ್ಯರಾತ್ರಿ ಆ ಸ್ಥಳಕ್ಕೆ ಹೋಗುವಾಗ ಪೊಲೀಸರು ಅವರನ್ನು ಎಳೆದಾಡಿ, ತಡೆದಿದ್ದಾರೆ. ಯಾವ ದೇಶದಲ್ಲಿ ನಾವಿದ್ದೇವೆ. ಸತ್ತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಮುಂದಾಗಿದ್ದರು. ಸಾಂತ್ವನ ಹೇಳುವುದು ನಮ್ಮ ಸಂಸ್ಕೃತಿ. ಎಳೆದಾಡಿ ತಡೆಯುವುದು ಬಿಜೆಪಿ ಸಂಸ್ಕೃತಿ. ಸರ್ವಾಧಿಕಾರಿ ಆಡಳಿತ ದೇಶದಲ್ಲಿ ನಡೆಯುತ್ತಿದೆ. ಹಿಟ್ಲರ್ ಮಾದರಿಯ ಆಡಳಿತ ನಡೆಯುತ್ತಿದೆ. ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ರೈತರ ಮಾತುಕತೆಗೂ ಕರೆಯದೇ ಇಂಥ ಕೃತ್ಯ ನಡೆಸಿರುವುದು ಖಂಡನೀಯ. ಆಡಳಿತದಲ್ಲಿ ಬಿಜೆಪಿಯವರು ಬ್ರಿಟಿಷರಿಗಿಂತ ಮೇಲು. ಪ್ರಿಯಾಂಕಾ ಗಾಂಧಿಯವರೇ ಇಡೀ ದೇಶದ ಜನ ನಿಮ್ಮ ಹಿಂದೆ ಇದ್ದಾರೆ. ನೀವು ಮುನ್ನುಗ್ಗಿ, ನಿಮ್ಮ ಬೆನ್ನ ಹಿಂದೆ ನಾವು ಇದ್ದೇವೆ. ದೇಶದ ಜನರೇ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದರು.

ಬೊಮ್ಮಾಯಿ‌ಗೆ ಗಡುವು:

ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಆದರೆ, ಇದುವರೆಗೂ ಕೃಷ್ಣಾ, ಮಹದಾಯಿ ಸೇರಿದಂತೆ ಯಾವುದೇ ಕೆಲಸವನ್ನು ಅವರು ಆರಂಭ ಮಾಡಿಲ್ಲ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಪಡಿಸಲು ಆಗಲ್ಲ ಎಂದಾದರೆ, ಮೇಕೆದಾಟು ಯೋಜನೆಯನ್ನು ಯಾಕೆ ಆರಂಭ ಮಾಡುತ್ತಿಲ್ಲ. ತಮಿಳುನಾಡಿನ ಜೊತೆ ಹೊಂದಾಣಿಕೆ ಇದೆಯಾ ಒಪ್ಪಂದ ಇದೆಯಾ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಆರಂಭಿಸಲು ಬೊಮ್ಮಾಯಿಗೆ ಒಂದು ತಿಂಗಳ ಗಡುವು ಕೊಡುತ್ತಿದ್ದೇನೆ. ಇನ್ನೊಂದು ತಿಂಗಳ ಒಳಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಬೇಕು. ಬೊಮ್ಮಾಯಿಗೆ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಬದ್ಧತೆ ಇಲ್ಲ. ಒಂದು ತಿಂಗಳ ಗಡುವು ಮುಗಿದ ಮೇಲೆ ಏನು ಎಂದು ಈಗಲೇ ಹೇಳಲ್ಲ ಎಂದು ಎಚ್ಚರಿಕೆ ನೀಡಿದರು.