ರಾಷ್ಟ್ರಗೀತೆ ಹಾಡುವ ವೇಳೆಯೇ ಹೃದಯಾಘಾತದಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಸಾವು…

61
firstsuddi

ಚಾಮರಾಜನಗರ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರಗೀತೆ ಹಾಡುವ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನಿರ್ಮಲ ಶಾಲೆಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಪೆಲಿಸಾ (15) ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಪ್ರೌಢ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ (10ನೇ ತರಗತಿ) ಅಭ್ಯಾಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಶಾಲೆಗೆ ಹೋದ ನಂತರ ಶಾಲೆಯ ಆವರಣದಲ್ಲಿ ರಾಷ್ಟ್ರಗೀತೆ ಹಾಡುವಾಗ ಪೆಲಿಸಾ ಏಕಾಏಕಿ ಕುಸಿದುಬಿದ್ದಿದ್ದಾಳೆ. ಶಿಕ್ಷಕರು ಬಂದು ನೋಡುವಷ್ಟರಲ್ಲಿಯೇ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕೂಡಲೇ ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಾಗಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಪೆಲಿಸಾ, ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ಆದರೆ, ವಿಧಿ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿನಿಯನ್ನು ಬಲಿ ಪಡೆದುಕೊಂಡಿದೆ.

ಸದ್ಯ ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವಿದ್ಯಾರ್ಥಿನಿ ಮೃತದೇಹ ಇರಿಸಲಾಗಿದೆ.