ಬಲವಂತದ ಸಾಲ ವಸೂಲಿಗೆ ಪರವಾನಿಗೆ ನೀಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಸಿದ್ದರಾಮಯ್ಯ.

155
firstsuddi

ಬೆಂಗಳೂರು : ಕಾಂಗ್ರೆಸ್ ಅಧಿಕಾರ ಇದ್ದ ವೇಳೆ ರೈತರಿಂದ ಸಹಕಾರಿ ಸಂಸ್ಥೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದೆಂದು ಹೊರಡಿಸಿದ್ದ ಸುತ್ತೋಲೆಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಂದ ಸಹಕಾರಿ ಸಂಸ್ಥೆಗಳ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದೆಂದು ನಮ್ಮಸರ್ಕಾರ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದು ಖಂಡನೀಯ. ಈ ಮೂಲಕ ಬಲವಂತದ ಸಾಲ ವಸೂಲಿಗೆ ಪರವಾನಿಗೆ ನೀಡಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ರಾಜ್ಯದ ಹದಿನೈದು ಜಿಲ್ಲೆಯ 55 ತಾಲ್ಲೂಕುಗಳು ಅತಿವೃಷ್ಟಿಗೆ ತುತ್ತಾಗಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರವನ್ನು ಇನ್ನೂ ನೀಡದಿರುವ ಸರ್ಕಾರ ಈಗ ಬಲತ್ಕಾರದಿದ ಬಾಕಿ ಸಾಲ ವಸೂಲಿ ಮಾಡಲು ಹೊರಟಿರುವುದು ಅಮಾನವೀಯ ನಡೆ. ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವು ಅನಿರೀಕ್ಷಿತವಾದುದೇನಲ್ಲ, ರೈತರ ಪರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ರೈತರನ್ನು ಗುಂಡಿಕ್ಕಿ ಸಾಯಿಸಿದ ಪಕ್ಷದ ನಿಜಬಣ್ಣ ನಿಧಾನವಾಗಿ ಈಗ ಬಯಲಾಗುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಪೀಡಿತ ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ರೈತರ ಜೊತೆ ನಮ್ಮ ಪಕ್ಷ ಕೂಡಾ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.