ನವದೆಹಲಿ: ರೋಜ್‌ಗಾರ್ ಮೇಳದ ಭಾಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದ 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು.
ನೇಮಕಾತಿ ಪತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೋಜ್‌ಗಾರ್ ಮೇಳವನ್ನು ಪ್ರಾರಂಭಿಸಲಾಯಿತು. ಕೇಂದ್ರ ಸರ್ಕಾರ, ಎನ್‍ಡಿಎ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ‘ರೋಜ್‌ಗಾರ್ ಮೇಳ’ ಆಯೋಜಿಸಲಾಗುತ್ತಿದೆ. ಇದುವರೆಗೆ ಲಕ್ಷಾಂತರ ಯುವಕರಿಗೆ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಪತ್ರ ನೀಡಲಾಗಿದೆ. ಇಂದು 50,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ದೀಪಾವಳಿಗೆ ಸ್ವಲ್ಪ ಸಮಯವಿದೆ, ಆದರೆ ಈ ಸಂದರ್ಭವು ನೇಮಕಾತಿ ಪತ್ರಗಳನ್ನು ಸ್ವೀಕರಿಸುವ 50,000 ಮಂದಿಯ ಕುಟುಂಬಗಳಿಗೆ ದೀಪಾವಳಿಗಿಂತ ಕಡಿಮೆಯೇನಲ್ಲ ಎಂದರು.
ಇಂದು ಭಾರತವು ಮುನ್ನಡೆಯುತ್ತಿರುವ ದಿಕ್ಕು, ವೇಗ ಬದಲಾಗುತ್ತಿದೆ. ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ಕಚ್‍ನಲ್ಲಿರುವ ಗುಜರಾತ್‍ನ ಧೋರ್ಡೊ ಗ್ರಾಮವನ್ನು ವಿಶ್ವಸಂಸ್ಥೆಯು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ಘೋಷಿಸಿತು. ಇದಕ್ಕೂ ಮೊದಲು ಕರ್ನಾಟಕದ ಹೊಯ್ಸಳ ದೇವಾಲಯಗಳು ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲಾಯಿತು. ಇದು ಉದ್ಯೋಗದ ಸಾಧ್ಯತೆಗಳನ್ನು ಮತ್ತು ಆರ್ಥಿಕತೆಯ ವಿಸ್ತರಣೆಯನ್ನು ಹೆಚ್ಚಿಸಿತು. ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಎಂದರೆ ಪ್ರತಿಯೊಂದು ಕ್ಷೇತ್ರಕ್ಕೂ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಿರುವ ‘ರೋಜ್‌ಗಾರ್ ಮೇಳ’ ನಮ್ಮ ಯುವಜನತೆಯ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ. ನಾವು ಉದ್ಯೋಗ ನೀಡುವುದು ಮಾತ್ರವಲ್ಲದೆ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುತ್ತಿದ್ದೇವೆ. ಇದು ಉದ್ಯೋಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ. ನಾವು ನೇಮಕಾತಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿದ್ದೇವೆ ಮಾತ್ರವಲ್ಲದೆ ಕೆಲವು ಪರೀಕ್ಷೆಗಳ ವ್ಯವಸ್ಥೆಯನ್ನು ಪುನರ್ ರಚಿಸಿದ್ದೇವೆ. ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ವ್ಯವಸ್ಥೆಯಲ್ಲಿ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಎಸ್ಎಸ್ಸಿ ಪರೀಕ್ಷೆಗಳನ್ನು ಈಗ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಪ್ರಾದೇಶಿಕ ಭಾಷೆಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಭಾಷೆಯ ಅಡೆತಡೆಯನ್ನು ಎದುರಿಸಿದವರಿಗೆ ಇದು ಅವಕಾಶವನ್ನು ನೀಡಿದೆ ಎಂದು ಮೋದಿ ಹೇಳಿದರು.










