ಮೈಸೂರು : ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತಂತೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ವಿರುದ್ಧ ನಾಲ್ಕು ಆರೋಪಗಳೂ ಕೇಳಿಬಂದಿದ್ದವು. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸರ್ಕಾರ ತನಿಖೆಗೆ ಆದೇಶಿಸಿದೆ. ತನಿಖಾಧಿಕಾರಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಅವರನ್ನು ನೇಮಿಸಲಾಗಿದ್ದು, 30 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದೆ. ರೋಹಿಣಿ ಸಿಂಧೂರಿಯವರು ಪ್ರಸ್ತುತ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣದ ಆರೋಪ, ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದಲ್ಲಿ 50 ಲಕ್ಷ ವೆಚ್ಚದಲ್ಲಿ ಅನಧಿಕೃತವಾಗಿ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ನಿರ್ಮಾಣ ಮಾಡಿ ಪಾರಂಪರಿಕ ಕಟ್ಟಡಕ್ಕೆ ಹಾನಿ ಮಾಡಿರುವುದು, ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿರುವುದು ಹಾಗೂ ಚಾಮರಾಜನಗರ ಆಕ್ಸಿಜನ ದುರಂತ ಪ್ರಕರಣಕ್ಕೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳನ್ನು ಸಿಂಧೂರಿ ವಿರುದ್ಧ ಮಾಡಲಾಗಿತ್ತು.
ಏನಿದು ಪರಿಸರ ಸ್ನೇಹಿ ಬ್ಯಾಗ್ ಖರೀದಿ ಹಗರಣ? : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ರೋಹಿಣಿ ಸಿಂಧೂರಿ ಅವರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೆ 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು 14 ಕೋಟಿ ರೂ.ಗೆ ಖರೀದಿ ಮಾಡಿದ್ದರು ಅಂತ ಆರೋಪಿಸಲಾಗಿತ್ತು. ಕೈ ಮಗ್ಗ ನಿಗಮ ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿ ರೋಹಿಣಿ ಸಿಂಧೂರಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ನೆಪದಲ್ಲಿ ಒಟ್ಟು 14 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿ ತನಿಖೆಗೆ ಆಗ್ರಹಿಸಿದ್ದರು.










