ಬೆಂಗಳೂರು : ಲಂಚ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಎಫ್ಎಸ್ಎಲ್ನಿಂದ ವರದಿ ಇನ್ನೂ ಬರಬೇಕಿದೆ. ಜಿಲ್ಲಾಧಿಕಾರಿ ಹುದ್ದೆ ದುರ್ಬಳಕೆಯ ಗಂಭೀರ ಆರೋಪವಿದೆ ಎಂದು ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ ವಾದಿಸಿದ್ದಾರೆ.
ಏನಿದು ಪ್ರಕರಣ ?
ಭ್ರಷ್ಟಾಚಾರ ಆರೋಪದಲ್ಲಿ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರನ್ನು ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿ ಜುಲೈ 4 ರಂದು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಮಂಜುನಾಥ್ ವಿರುದ್ಧ ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದಿರುವ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ.










