ಲಂಚಕ್ಕೆ ಕೈಯೊಡ್ಡಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ನಾಲ್ವರು ಪೊಲೀಸರು ಸಸ್ಪೆಂಡ್…

72
firstsuddi

ಬೆಂಗಳೂರು: ವಂಚನೆ ಪ್ರಕರಣ ಸಂಬಂಧ ಲಂಚಕ್ಕೆ ಕೈಯೊಡ್ಡಿ ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್‌ಸ್ಟೇಬಲ್‌ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್‌ಸ್ಟೇಬಲ್‌ ಸಂದೇಶ್ ಅಮಾನತುಗೊಂಡಿರುವ ಪೊಲೀಸರಾಗಿದ್ದಾರೆ. ಎಸಿಪಿ ವರದಿ ಆಧರಿಸಿ ಈ ನಾಲ್ವರನ್ನೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ:
ಕೇರಳದಲ್ಲಿ ಕರ್ನಾಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬಂಧನ ಮಾಡದೇ ಇರಲು 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಕರ್ನಾಟಕದ ಪೊಲೀಸರನ್ನು ಕೇರಳದ ಕೊಚ್ಚಿಯಲ್ಲಿ ಅರೆಸ್ಟ್ ಮಾಡಲಾಗಿತ್ತು.

ಬಂಧಿತರು ಬೆಂಗಳೂರು ವೈಟ್ ಫೀಲ್ಡ್ ಸೆನ್ ಪೊಲೀಸರಾಗಿದ್ದಾರೆ. ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್‌ ವಂಚನೆ ಕೇಸ್ ರಿಕವರಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್‌ವೇರ್ ಇಂಜಿನಿಯರ್ ಬಳಿ ಬರೊಬ್ಬರಿ ಆನ್‌ಲೈನ್‌ ಮೂಲಕ 26 ಲಕ್ಷ ರೂ. ಹಣವನ್ನು ಪಡೆದು ದುಷ್ಕರ್ಮಿಗಳು ವಂಚನೆ ಮಾಡಿದ್ದರು. ಈ ಹಿನ್ನಲೆ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಹೊರಟಿತ್ತು.

ನೌಶಾದ್ ಎಂಬವನಿಂದ ಆನ್‌ಲೈನ್‌ ಫ್ರಾಡ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನಲೆ ಅರೆಸ್ಟ್ ಮಾಡಲು ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಇನ್ನು ಈ ಕುರಿತು ಆರೋಪಿ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಬಳಿಕ ಬೆಂಗಳೂರು ಪೊಲೀಸರು ನಾವು ಪ್ರಕರಣವೊಂದರ ತನಿಖೆಗೆ ಬಂದಿರುವುದಾಗಿ ತಿಳಿಸಿದ್ದರು. ಆದರೂ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಲಾಗಿತ್ತು.